ADVERTISEMENT

ದೇಶ ವಿರೋಧಿ ಪೋಸ್ಟ್ ಹಾಕಿದರೆ ಕ್ರಮ: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 7:28 IST
Last Updated 21 ಫೆಬ್ರುವರಿ 2019, 7:28 IST
   

ಹುಬ್ಬಳ್ಳಿ: ‘ಶಾಸಕ ಕಂಪ್ಲಿ ಗಣೇಶ ಅವರನ್ನು ಗುಜರಾತ್‌ನಲ್ಲಿ ಬಂಧಿಸಲಾಗಿದ್ದು, ನ್ಯಾಯಾಲಯದ ಎದುರು ಹಾಜರುಪಡಿಸಲಾಗುವುದು’ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಷ್ಟ್ರ ವಿರೋಧಿ ಹೇಳಿಕೆ ನೀಡುವುದು, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಹಾಕುವುದು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುವುದನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಈ ವಿಷಯದ ಬಗ್ಗೆ ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಫೇಸ್‌ಬುಕ್‌ ಹಾಗೂ ಟ್ವಿಟ್ಟರ್ ಈ ವಿಷಯದಲ್ಲಿ ಸಹಕಾರ ನೀಡುತ್ತಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಸಹ ಕಾನೂನುಗಳಿಗೆ ಕೆಲವೊಂದು ತಿದ್ದುಪಡಿ ತರಬೇಕು’ ಎಂದರು.

‘ಭಯೋತ್ಪಾದಕ ದೇಶವಾಗಿರುವ ಪಾಕಿಸ್ತಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿಸಬೇಕು. ಭಯೋತ್ಪಾದನೆಯನ್ನೇ ಉದ್ಯಮ ಮಾಡಿಕೊಂಡಿರುವ ಆ ದೇಶವನ್ನು ಮೂಲೆಗುಂಪು ಮಾಡಬೇಕು. ಈ ವಿಷಯದಲ್ಲಿ ಪ್ರಧಾನಿ ಸೇರಿದಂತೆ ಯಾರೂ ರಾಜಕೀಯ ಮಾಡಬಾರದು’ ಎಂದರು.

ADVERTISEMENT

ವಿಡಿಯೊವೊಂದರಲ್ಲಿ ಅಪರಿಚಿತರು ಹುಬ್ಬಳ್ಳಿ ಮುಂದಿನ ಟಾರ್ಗೆಟ್ ಎಂದು ಹೇಳಿರುವ ಪ್ರಕರಣದ ತನಿಖೆ ನಡೆಯಲಿದೆ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕಮಿಷನರ್ ಎಂ.ಎನ್. ನಾಗರಾಜ, ‘ಆ ವಿಡಿಯೊವನ್ನು ಪರಿಶೀಲನೆ ನಡೆಸಿದ್ದೇವೆ. ಅವರು ‘ಹೂಗ್ಲಿ’ ಎಂದಿದ್ದಾರೆ ಹುಬ್ಬಳ್ಳಿ ಅಲ್ಲ ಎಂದು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅಲ್ಲದೆ ಅವರ ಹಿಂದೆ ದೇವರ ಫೋಟೊ ಸಹ ಇದೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.