ADVERTISEMENT

ಕಾರ್ಮಿಕರ ಕೆಲಸದ ಅವಧಿ 10 ಗಂಟೆಗೆ ಹೆಚ್ಚಳ?

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 20:16 IST
Last Updated 17 ಜೂನ್ 2025, 20:16 IST
   

ಬೆಂಗಳೂರು: ಕಾರ್ಮಿಕರ ಕೆಲಸದ ಅವಧಿಯ ಗರಿಷ್ಠ ಮಿತಿಯನ್ನು ದಿನಕ್ಕೆ ಒಂಬತ್ತರಿಂದ 10 ಗಂಟೆಗೆ ಹೆಚ್ಚಿಸುವುದು ಮತ್ತು 10 ಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳನ್ನು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡುವ ಉದ್ದೇಶದಿಂದ ಎರಡು ಕಾನೂನುಗಳ ತಿದ್ದುಪಡಿಗೆ ರಾಜ್ಯ ಸರ್ಕಾರ ಮುಂದಾಗಿದೆ.

ಉದ್ದೇಶಿತ ಕಾನೂನು ತಿದ್ದುಪಡಿ ಕುರಿತು ಚರ್ಚಿಸಲು ಕೈಗಾರಿಕಾ ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಸಭೆಯನ್ನು ಕಾರ್ಮಿಕ ಇಲಾಖೆ ಬುಧವಾರ ಹಮ್ಮಿಕೊಂಡಿದೆ.

ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಸೆಕ್ಷನ್ 7ರ ಪ್ರಕಾರ, ಕೆಲಸದ ಅವಧಿ ದಿನಕ್ಕೆ ಒಂಬತ್ತು ಗಂಟೆಯನ್ನು ಮೀರಬಾರದು ಮತ್ತು ಗರಿಷ್ಠ ಹೆಚ್ಚುವರಿ ಅವಧಿ (ಒಟಿ) 10 ಗಂಟೆಗಳನ್ನು ಮೀರಬಾರದು. ಉದ್ದೇಶಿತ ತಿದ್ದುಪಡಿಯ ಮೂಲಕ, ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 10 ಗಂಟೆ ಮತ್ತು ಹೆಚ್ಚುವರಿ ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 12 ಗಂಟೆಗಳಿಗೆ ವಿಸ್ತರಿಸಲು ಸರ್ಕಾರ ಮುಂದಾಗಿದೆ. ಆ ಮೂಲಕ, ಮೂರು ತಿಂಗಳಲ್ಲಿ ಹೆಚ್ಚುವರಿ ಕೆಲಸದ ಗರಿಷ್ಠ ಮಿತಿಯು 50ರಿಂದ 144 ಗಂಟೆಗೆ ಹೆಚ್ಚಳ ಆಗಲಿದೆ.

ADVERTISEMENT

ಛತ್ತೀಸಗಡ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳು ಈಗಾಗಲೇ ಇದೇ ರೀತಿಯ ತಿದ್ದುಪಡಿಗಳನ್ನು ಮಾಡಿವೆ ಎಂದು ಕಾರ್ಮಿಕ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.