ADVERTISEMENT

ಹುಲಿ ಸೆರೆಯ ಬಳಿಕ ಕೊಡಗು ಭೇಟಿ: ಅರವಿಂದ ಲಿಂಬಾವಳಿ

ಅರಣ್ಯ ಸಚಿವ ಅರವಿಂದ ಲಿಂಬಾವಳಿ ಭರವಸೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 18:41 IST
Last Updated 15 ಮಾರ್ಚ್ 2021, 18:41 IST
ಹುಲಿ–ಸಂಗ್ರಹ ಚಿತ್ರ
ಹುಲಿ–ಸಂಗ್ರಹ ಚಿತ್ರ   

ಬೆಂಗಳೂರು: ‘ಪೊನ್ನಂಪೇಟೆ ತಾಲ್ಲೂಕಿನಲ್ಲಿ ಮೂವರನ್ನು ಸಾಯಿಸಿರುವ ಹುಲಿಯನ್ನು ಯಾವುದೇ ರೂಪದಲ್ಲಾದರೂ ಸೆರೆಹಿಡಿದ ಬಳಿಕವೇ ಕೊಡಗು ಜಿಲ್ಲೆಗೆ ಭೇಟಿ ನೀಡುತ್ತೇನೆ’ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಹುಲಿ ದಾಳಿಯಿಂದ ಕೊಡಗು ಜಿಲ್ಲೆಯಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿರುವ ಕುರಿತು ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ವೀಣಾ ಅಚ್ಚಯ್ಯ ಅವರು ಸರ್ಕಾರದ ಗಮನ ಸೆಳೆದರು. ತಕ್ಷಣವೇ ಕೊಡಗು ಜಿಲ್ಲೆಗೆ ಬಂದು ಜನರಿಗೆ ಧೈರ್ಯ ತುಂಬುವಂತೆ ಸಚಿವರನ್ನು ಆಗ್ರಹಿಸಿದರು.

ಉತ್ತರ ನೀಡಿದ ಸಚಿವರು, ‘ನಾನು ಬಂದರೆ ಹುಲಿ ಸಿಗುವುದಾದರೆ ಬರಲು ಸಿದ್ಧ. ಆದರೆ, ನರಭಕ್ಷಕ ಹುಲಿ ಸೆರೆಗೆ ಈಗಾಗಲೇ ಕಾರ್ಯಾಚರಣೆ ಆರಂಭವಾಗಿದೆ. ಅನಿವಾರ್ಯ ಆದಲ್ಲಿ ಗುಂಡಿಕ್ಕುವುದಕ್ಕೂ ಆದೇಶ ನೀಡಿದ್ದೇನೆ. ನಾನು ಈಗ ಅಲ್ಲಿಗೆ ಭೇಟಿನೀಡುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ. ಆದ್ದರಿಂದ ಕಾರ್ಯಾಚರಣೆ ಮುಗಿದ ಬಳಿಕವೇ ಕೊಡಗು ಜಿಲ್ಲೆಗೆ ಬರುತ್ತೇನೆ’ ಎಂದರು.

ADVERTISEMENT

ವನ್ಯಜೀವಿಗಳಿಂದ ಸಾಕು ಪ್ರಾಣಿಗಳು ಮೃತಪಟ್ಟಾಗ ವಿಪತ್ತು ಪರಿಹಾರ ನಿಧಿ ಮಾನದಂಡದಂತೆ ಪರಿಹಾರ ನೀಡಲು ಯೋಚಿಸಲಾಗಿದೆ. ಆನೆ ಮತ್ತಿತರ ಕಾಡು ಪ್ರಾಣಿಗಳಿಂದ ಆಗುವ ಬೆಳೆಹಾನಿಗೆ ಪ್ರಧಾನಮಂತ್ರಿ ಫಸಲ್‌ ವಿಮೆ ಯೋಜನೆಯಡಿಯಲ್ಲಿ ಪರಿಹಾರ ನೀಡುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಶೀಘ್ರದಲ್ಲಿ ಈ ಕುರಿತು ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಸುನೀಲ್ ಸುಬ್ರಮಣಿ ಅವರ ಪ್ರಶ್ನೆಗೆ ಉತ್ತರಿಸುವ ವೇಳೆಯಲ್ಲೂ ಸಚಿವರು ಇದೇ ಮಾಹಿತಿ ನೀಡಿದರು. ಕುಶಾಲನಗರ ವಲಯ ವ್ಯಾಪ್ತಿಯ ಅತ್ತೂರು ಸಮೀಪದ ಹಾರಂಗಿ ವೃಕ್ಷೋದ್ಯಾನದ ಬಳಿ ಹೊಸದಾಗಿ ಸಾಕಾನೆ ಶಿಬಿರ ಆರಂಭಿಸುವ ಪ್ರಸ್ತಾವಕ್ಕೆ ಫೆಬ್ರುವರಿ 12ರಂದು ಒಪ್ಪಿಗೆ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.