ಸುವರ್ಣ ವಿಧಾನಸೌಧ (ಬೆಳಗಾವಿ): ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಒಡೆತನ, ಖಾತೆ ವರ್ಗಾವಣೆಗೆ ಸಂಬಂಧಿಸಿದ ಗೊಂದಲಗಳ ಪರಿಶೀಲನೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಬುಧವಾರ ಪ್ರಕಟಿಸಿದರು.
ವಕ್ಫ್ ಮಂಡಳಿಯು ರೈತರ ಆಸ್ತಿ, ಮಠ–ಮಂದಿರಗಳ ಆಸ್ತಿಯ ಮೇಲೆ ಹಕ್ಕು ಸಾಧಿಸುತ್ತಿದೆ ಎಂದು ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಗೆ ಸದನದಲ್ಲಿ ಉತ್ತರ ನೀಡಿದ ಅವರು, ‘ರೈತರಿಗೆ ಮಂಜೂರಾದ ಜಮೀನು, ಮಠ, ಮಂದಿರಗಳ ಆಸ್ತಿ ಮತ್ತು ರುದ್ರಭೂಮಿಗಳ ಜಮೀನಿನ ಮೇಲೆ ವಕ್ಫ್ ಮಂಡಳಿ ಹಕ್ಕು ಸಾಧಿಸುವುದಿಲ್ಲ. ಅದಕ್ಕೆ ಹೊರತಾಗಿಯೂ ಗೊಂದಲಗಳಿದ್ದರೆ ಪರಿಹಾರ ಕಂಡುಕೊಳ್ಳಲು ಸಮಿತಿ ನೇಮಿಸಲಾಗುವುದು’ ಎಂದರು.
ಯಾವುದೇ ಖಾಸಗಿ ಆಸ್ತಿಗೆ ವಕ್ಫ್ ಮಂಡಳಿ ನೋಟಿಸ್ ನೀಡಿದ್ದರೆ, ಮಂಜೂರಾದ ಜಮೀನುಗಳ ಸ್ವಾಧೀನಕ್ಕೆ ಪ್ರಕ್ರಿಯೆ ಆರಂಭಿಸಿದ್ದರೆ, ಇನಾಂ ರದ್ದತಿ ಕಾಯ್ದೆ ಮತ್ತು ಭೂ ಸುಧಾರಣಾ ಕಾಯ್ದೆಯಡಿ ಹಕ್ಕು ಮಂಡನೆ ಬಾಕಿ ಉಳಿದಿದ್ದರೆ ಸಮಿತಿಯ ಮುಂದೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. ಸಮಿತಿಯು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದರು.
‘ಇನಾಂ ರದ್ದತಿ ಕಾಯ್ದೆ ಮತ್ತು ಕರ್ನಾಟಕ ಭೂ ಸುಧಾರಣಾ ಕಾಯ್ದೆಯಡಿ ರೈತರಿಗೆ ಮಂಜೂರಾಗಿರುವ ಯಾವುದೇ ಜಮೀನಿನ ಮೇಲೆ ವಕ್ಫ್ ಮಂಡಳಿ ಹಕ್ಕು ಸಾಧಿಸಲು ಅವಕಾಶ ನೀಡುವುದಿಲ್ಲ. ದೇವಸ್ಥಾನ, ರುದ್ರಭೂಮಿ ಮತ್ತು ಶಾಲೆಗಳು ವಕ್ಫ್ ಆಸ್ತಿಯಲ್ಲಿದ್ದರೆ ಅಂತಹ ಆಸ್ತಿಗಳ ಮೇಲಿನ ಹಕ್ಕನ್ನೂ ತ್ಯಜಿಸಲು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸಭೆಯಲ್ಲಿ ತೀರ್ಮಾನವಾಗಿದೆ ಎಂದು ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ ನಮಗೆ ತಿಳಿಸಿದ್ದರು. ಅವರ ಸಲಹೆಯಂತೆ ವಕ್ಫ್ ಆಸ್ತಿಯಲ್ಲಿರುವ ದೇವಸ್ಥಾನ, ರುದ್ರಭೂಮಿ, ಶಾಲೆಗಳಿಗೂ ರಕ್ಷಣೆ ದೊರಕಲಿದೆ’ ಎಂದು ತಿಳಿಸಿದರು.
ಈ ವಿಷಯದ ಕುರಿತು ವಿಸ್ತೃತವಾಗಿ ಉತ್ತರ ನೀಡಿದ ಜಮೀರ್ ಅಹಮ್ಮದ್ ಖಾನ್ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೂಡ, ರೈತರಿಗೆ ಮಂಜೂರಾದ ಜಮೀನು, ದೇವಸ್ಥಾನ, ರುದ್ರಭೂಮಿ ಮತ್ತು ಶಾಲಾ ಜಮೀನುಗಳ ಮೇಲೆ ವಕ್ಫ್ ಮಂಡಳಿ ಹಕ್ಕು ಸಾಧಿಸುವುದರಿಂದ ರಕ್ಷಣೆ ದೊರಕಲಿದೆ ಎಂದು ಪುನರುಚ್ಚರಿಸಿದರು.
‘ವಕ್ಫ್ ಮಂಡಳಿಯ ಸ್ವಾಧೀನದಲ್ಲಿದ್ದ 47,263 ಎಕರೆ ಜಮೀನುಗಳನ್ನು ಇನಾಂ ರದ್ದತಿ ಕಾಯ್ದೆಯಡಿ ಹಾಗೂ 23,620 ಎಕರೆ ಜಮೀನುಗಳನ್ನು ಭೂ ಸುಧಾರಣಾ ಕಾಯ್ದೆಯಡಿ ರೈತರಿಗೆ ಮಂಜೂರು ಮಾಡಲಾಗಿತ್ತು. ಈ ರೀತಿ ಮಂಜೂರಾದ 70,883 ಎಕರೆ ಜಮೀನುಗಳ ಒಡೆತನವು ರೈತರ ಬಳಿಯಲ್ಲೇ ಉಳಿಯಲಿದೆ’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.