ADVERTISEMENT

PV Web Exclusive | ಕಡಲ ಮಕ್ಕಳ ಅಳಲು

ಮೀನುಗಾರಿಕೆ ಋತು ಆರಂಭಗೊಂಡರೂ ಸಂತಸವಿಲ್ಲ

ಪ್ರಕಾಶ ಕುಗ್ವೆ
Published 1 ಸೆಪ್ಟೆಂಬರ್ 2020, 6:19 IST
Last Updated 1 ಸೆಪ್ಟೆಂಬರ್ 2020, 6:19 IST
ಮಂಗಳೂರಿನ ಬಂದರ್‌ನ ಗೋದಾಮುನಲ್ಲಿಟ್ಟಿರುವ ಮೀನಿನ ಬಲೆಯನ್ನು ಟ್ರಕ್ಕಿನಲ್ಲಿ ಹಾಕಿಕೊಂಡು ಬೋಟಿನ ಹತ್ತಿರ ತೆಗೆದುಕೊಂಡು ಹೋಗುತ್ತಿರುವ ಕಾರ್ಮಿಕರು.ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಮಂಗಳೂರಿನ ಬಂದರ್‌ನ ಗೋದಾಮುನಲ್ಲಿಟ್ಟಿರುವ ಮೀನಿನ ಬಲೆಯನ್ನು ಟ್ರಕ್ಕಿನಲ್ಲಿ ಹಾಕಿಕೊಂಡು ಬೋಟಿನ ಹತ್ತಿರ ತೆಗೆದುಕೊಂಡು ಹೋಗುತ್ತಿರುವ ಕಾರ್ಮಿಕರು.ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ   

ಮಂಗಳೂರು: ‘ಸರಿಸುಮಾರು ಅರ್ಧ ವರ್ಷ ಕಡಲಿಗೆ ಇಳಿಯಲೇ ಇಲ್ಲ. ಬೋಟ್ ಎಂಜಿನ್‌ ರಿಪೇರಿಗೆ ಬಂದಿದೆ. ಬೋಟ್ ಅಂದಗೆಟ್ಟಿದೆ; ಬಲೆ ಸುರುಳಿ ಸುತ್ತಿದೆ. ರಿಪೇರಿಗೆ ಲಕ್ಷಾಂತರ ರೂಪಾಯಿ ಬೇಕು. ಕೈಯಲ್ಲಿ ಹಣ ಇಲ್ಲ; ಸಾಲ ಯಾರೂ ಕೊಡುತ್ತಿಲ್ಲ. ಇದೇ ದಕ್ಕೆಯಲ್ಲಿ ಕೂಲಿ ಕೆಲಸ ಬೇಕಾದರೆ ಮಾಡುತ್ತೇನೆ. ಆದರೆ, ಈ ಸಲ ಸಮುದ್ರಕ್ಕೆ ಬೋಟ್‌ ಇಳಿಸಲ್ಲ’

–ಹೀಗೆ ಕಡಲತಡಿಯ ನೋವು, ಸಂಕಷ್ಟಗಳನ್ನು ಹೇಳಿಕೊಂಡವರು ಮಂಗಳೂರು ಬೆಂಗ್ರೆ ನಿವಾಸಿ, ಬೋಟ್‌ ಮಾಲೀಕ ನಿಶಾಂತ್‌ ಶೆಟ್ಟಿ.

‘ಈ ವರ್ಷ ಇಡೀ ಅನಾಹುತಗಳ ಸರಮಾಲೆ; ಆರಂಭದಲ್ಲೇ ಚಂಡಮಾರುತದಿಂದಾಗಿ ಎರಡು ತಿಂಗಳು ಮೀನುಗಾರಿಕೆ ಸ್ಥಗಿತಗೊಂಡಿತು. ನಂತರ ದಿನಗಳಲ್ಲಿ ಸಮುದ್ರದಲ್ಲಿ ಮೀನುಗಳು ಸಿಗಲೇ ಇಲ್ಲ. ನಂತರ ನಡೆದಿದ್ದೆಲ್ಲಾ ಕೊರೊನಾದ್ದೇ ಆಟ. ಈಗ ಯಾವ ವಿಶ್ವಾಸದ ಮೇಲೆ ಬೋಟು ಕಡಲಿಗೆ ಬಿಡಲಿ’ ಎಂದು ಪ್ರಶ್ನಿಸುತ್ತಾರೆ ಟ್ರಾಲ್ ಬೋಟ್ ಅಸೋಸಿಯೇಷನ್‌ನ ಸಂದೀಪ್ ಪುತ್ರನ್.

ADVERTISEMENT

ಇವು ಇವರಿಬ್ಬರ ಕಥೆಗಳಲ್ಲ; ಹಲವು ಬೋಟ್‌ ಮಾಲೀಕರದ್ದು ಇದೇ ಸ್ಥಿತಿ.

ಲಾಕ್‌ಡೌನ್‌ನಿಂದಾಗಿ ಅವಧಿ ಪೂರ್ವವೇ ಮೀನುಗಾರಿಕೆ ಋತು ಮೊಟಕಾಗಿತ್ತು. ಆಗಸ್ಟ್‌ 1ರಿಂದ ಆರಂಭವಾಗಬೇಕಿದ್ದ ಮೀನುಗಾರಿಕೆಗೂ ಕೊರೊನಾ ಸಂಕಷ್ಟ ಎದುರಾಯಿತು. ಈಗ ಸೆಪ್ಟೆಂಬರ್‌ 1ರಿಂದ ಆರಂಭಗೊಂಡಿದೆ; ಆದರೆ, ಮೀನುಗಾರರಲ್ಲಿ ಯಾವುದೇ ಉತ್ಸಾಹ, ಭರವಸೆಗಳು ಕಾಣುತ್ತಿಲ್ಲ.

ಉಡುಪಿ ಜಿಲ್ಲೆಯಲ್ಲಿ ಇನ್ನೊಂದು ರೀತಿಯ ಕಥೆ. ಹದಿನೈದು ದಿನಗಳ ಹಿಂದೆ ಇಲ್ಲಿ ಮೀನುಗಾರಿಕೆ ಆರಂಭವಾದರೂ ಮೀನುಗಾರರಿಗೆ ಎಂದಿನಂತೆ ನಿರಾಸೆ ಕಾದಿದೆ. ಕೊರೊನಾ ಲಾಕ್‌ಡೌನ್‌, ಮೀನುಗಾರಿಕಾ ರಜೆ ಹಾಗೂ ಸಮುದ್ರ ಪ್ರಕ್ಷುಬ್ಧಗೊಂಡ ಪರಿಣಾಮ ಐದಾರು ತಿಂಗಳು ಮೀನುಗಾರಿಕೆ ಸ್ಥಗಿತವಾಗಿತ್ತು. ಈ ಬಾರಿ ಉತ್ತಮ ಮೀನು ಬಲೆಗೆ ಸಿಗಬಹುದು ಎಂದು ಸಮುದ್ರಕ್ಕಿಳಿದವರಿಗೆ ಮತ್ತೆ ನಿರಾಶೆಯಾಗಿದೆ.

‘ಈ ಅವಧಿಯಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದ ಬೇಡಿಕೆ ಅಂಜಲ್‌, ಪ್ಲಾಂಪ್ಲೆಟ್‌ ಸಿಗುತ್ತಿಲ್ಲ. ಬದಲಾಗಿ, ಕಡಿಮೆ ಬೆಲೆಯ ರಿಬ್ಬನ್ ಫಿಶ್ ಸಿಗುತ್ತಿವೆ. ಹಾಕಿದ ಬಂಡವಾಳವೂ ಕೈಸೇರುತ್ತಿಲ್ಲ. ಮೀನುಗಾರಿಕೆ ನಿಲ್ಲಿಸಿದರೆ ಸಾವಿರಾರು ಕೂಲಿ ಕಾರ್ಮಿಕರು ಬೀದಿಗೆ ಬರಲಿದ್ದಾರೆ. ಮೀನುಗಾರಿಕೆ ನಡೆಸಿದರೆ ನಷ್ಟವಾಗುತ್ತಿದೆ’ ಎನ್ನುತ್ತಾರೆ ಉಡುಪಿಯ ಬೋಟ್‌ ಮಾಲೀಕ ರವಿರಾಜ್ ಸುವರ್ಣ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ 1,331 ಟ್ರಾಲ್ ಬೋಟ್, 1,500 ಪರ್ಸೀನ್ ಬೋಟ್ ಹಾಗೂ ಇತರೆ 500 ಬೋಟ್‌ಗಳು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಬೋಟ್‌ಗಳು ಈ ಸಲ ಕಡಲಿಗೆ ಇಳಿಯುವುದು ಅನುಮಾನ ಎನ್ನುತ್ತಾರೆ ಉದ್ಯಮದ ಒಳ–ಹೊರಗು ಅರಿತಿರುವ ಬೋಟ್ ಚಾಲಕ ಸತೀಶ್‌ ರೈ.

ಮಂಗಳೂರಿನ ಆಳ ಸಮುದ್ರ ಮೀನುಗಾರಿಕೆಯಲ್ಲಿ ಶೇ 80ರಷ್ಟು ಕಾರ್ಮಿಕರು ಒಡಿಶಾ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು, ಪಶ್ಚಿಮ ಮಂಗಳ ಹಾಗೂ ಕೇರಳ ರಾಜ್ಯದವರು. ಲಾಕ್‌ಡೌನ್‌ನಿಂದ ತಮ್ಮ ರಾಜ್ಯಗಳಿಗೆ ತೆರಳಿದ್ದವರಲ್ಲಿ ಶೇ 25ರಷ್ಟು ಜನ ಮಾತ್ರ ಬಂದಿದ್ದಾರೆ. ಹಾಗಾಗಿ, ಮೀನುಗಾರಿಕೆಗೆ ಕಾರ್ಮಿಕರ ಕೊರತೆ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ.

ಈಗ ಸರ್ಕಾರ ಹೊರ ರಾಜ್ಯಗಳ ಕಾರ್ಮಿಕರಿಗೆ ಕ್ವಾರಂಟೈನ್‌ ತೆಗೆದು ಹಾಕಿದೆ. ಸೇವಾ ಸಿಂಧು ಆ್ಯಪ್‌ನಲ್ಲಿ ನೋಂದಣಿ ಕಡ್ಡಾಯವನ್ನೂ ಕೈಬಿಟ್ಟಿದೆ. ಹೀಗಾದರೂ ಹೊರ ರಾಜ್ಯಗಳಿಂದ ಕಾರ್ಮಿಕರು ಬರುತ್ತಾರೆಂಬ ಖಾತ್ರಿ ಯಾರಿಗೂ ಇಲ್ಲ.

‘ಕೊರೊನಾದ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳುವ ಶೇ 25 ರಷ್ಟು ಬೋಟ್‌ಗಳಾದರೂ ಅದೇ ದಿನ ಬಂದರಿಗೆ ಮರಳುವಂತೆ ನೋಡಿಕೊಳ್ಳಬೇಕು ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಆದರೆ, ವಾಸ್ತವದಲ್ಲಿ ಇದು ಸಾಧ್ಯವಿಲ್ಲ. ಆಳ ಸಮುದ್ರದ ಮೀನುಗಾರಿಕೆ ಮಾಡುವ ಬೋಟ್‌ಗಳಲ್ಲಿ 8–10 ಜನರ ತಂಡ ಇರಲಿದ್ದು, 10 ದಿನಗಳವರೆಗೆ ಸಮುದ್ರದಲ್ಲಿ ಮೀನು ಹಿಡಿಯುತ್ತದೆ. ಯಾಂತ್ರೀಕೃತ ಬೋಟ್‌ಗಳು ಮೂರು ದಿನಕ್ಕೆ ಬಂದರಿಗೆ ಹಿಂದಿರುಗುತ್ತವೆ. ಕೆಲವು ಪರ್ಸಿನ್‌ ಬೋಟ್‌ಗಳು ಮಾತ್ರ ಅದೇ ದಿನ ಬಂದರಿಗೆ ಮರಳಲು ಸಾಧ್ಯವಿದೆ’ ಎನ್ನುತ್ತಾರೆ ಬೋಟ್‌ ಮಾಲೀಕರು.

ಸುರಕ್ಷಿತ ಮೀನುಗಾರಿಕೆ ಎನ್ನುವುದು ಈಗ ದೊಡ್ಡ ಸವಾಲು. ಅಗತ್ಯ ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ. ಬೋಟ್‌ಗಳಲ್ಲಿ ದಕ್ಕೆಗೆ ತರುವ ಮೀನಿನ ನಿರ್ವಹಣೆ, ಸಾಗಣೆ ಹಾಗೂ ಮಾರಾಟದ ವ್ಯವಸ್ಥೆ ಹೇಗೆ ಎನ್ನುವ ಬಗ್ಗೆಯೂ ಚರ್ಚೆ ನಡೆದಿದೆ.

‘ಮೀನುಗಾರಿಕೆ ಆರಂಭವಾದರೂ ನಿಭಾಯಿಸುವುದು ಕಷ್ಟಸಾಧ್ಯವಾಗಿದೆ. ಒಂದೆಡೆ ಸಾಕಷ್ಟು ಕಾರ್ಮಿಕರಿಲ್ಲ; ಇನ್ನೊಂದೆಡೆ ಮೀನು ರಫ್ತುದಾರರು ಕೋವಿಡ್‌ನಿಂದ ಕಂಗಾಲಾಗಿದ್ದಾರೆ. ಮೀನು ಖರೀದಿಸುವ ಫಿಶ್ ಮೀಲ್ಸ್ ಕಾರ್ಖಾನೆಗಳು ಅರ್ಧಕ್ಕೆ ಅರ್ಧ ಬಾಗಿಲು ಮುಚ್ಚಿವೆ’ ಎನ್ನುತ್ತಾರೆ ಟ್ರಾಲ್ ಬೋಟ್ ಅಸೋಸಿಯೇಷನ್‌ನ ಸಂದೀಪ್ ಪುತ್ರನ್.

ಮತ್ಸ್ಯ ಉತ್ಪಾದನೆಯೇ ಕುಸಿತ

ಸಮುದ್ರದಲ್ಲೇ ಮೀನು ಉತ್ಪಾದನೆ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಕುಂಠಿತಗೊಳ್ಳುತ್ತಿದೆ. ಈ ಬಗ್ಗೆ ಮೀನುಗಾರಿಕೆ ತಜ್ಞರು ಹಾಗೂ ಸಂಶೋಧಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಮತ್ಯ್ಸ ಉತ್ಪಾದನೆ ಕಡಿಮೆಯಾಗುತ್ತಿರುವುದಕ್ಕೆ ಹವಮಾನ ವೈಪರೀತ್ಯ ಹಾಗೂ ಕಲುಷಿತಗೊಂಡ ಸಮುದ್ರ ಎಂಬ ಅಂಶಗಳನ್ನು ಸಂಶೋಧಕರು ಸದ್ಯಕ್ಕೆ ಕಂಡುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.