ADVERTISEMENT

ಮಹಿಳೆ ಕಟ್ಟಿದ ಉದ್ಯಮ: ‘ಗಿನಿಪಿಗ್’ ಬಂದಾವು, ಆದಾಯ ತಂದಾವು

ಉದ್ಯೋಗ ಹೋದರೂ ‌ಕೈ ಹಿಡಿದ ಉದ್ಯಮ । ಮಾಸಿಕ ₹1.5 ಲಕ್ಷ ವರಮಾನ

ಕೆ.ಶಿವಣ್ಣ
Published 14 ಸೆಪ್ಟೆಂಬರ್ 2024, 20:42 IST
Last Updated 14 ಸೆಪ್ಟೆಂಬರ್ 2024, 20:42 IST
ಆನೇಕಲ್‌ ತಾಲ್ಲೂಕು ದಿನ್ನೂರು ಗ್ರಾಮದಲ್ಲಿರುವ ಗಿನಿಪಿಗ್‌ ಸಾಕಣೆ ಕೇಂದ್ರ
ಆನೇಕಲ್‌ ತಾಲ್ಲೂಕು ದಿನ್ನೂರು ಗ್ರಾಮದಲ್ಲಿರುವ ಗಿನಿಪಿಗ್‌ ಸಾಕಣೆ ಕೇಂದ್ರ   

ಆನೇಕಲ್: ಕೋವಿಡ್‌ ಅವಧಿಯಲ್ಲಿ ಉದ್ಯೋಗ ಕಳೆದುಕೊಂಡು ಮನೆಯಲ್ಲಿ ಕುಳಿತಿದ್ದ ಎಂಜಿನಿಯರಿಂಗ್‌ ಪದವೀಧರೆಗೆ ಪುನಃ ಬದುಕು ಕಟ್ಟಿಕೊಳ್ಳಲು ‘ಗಿನಿಪಿಗ್‌’ ನೆರವಿಗೆ ಬಂದಿದೆ. ಈಗ ಗಿನಿಪಿಗ್‌ ಸಾಕಣೆಯೇ ಉದ್ಯಮವಾಗಿ ಅವರಿಗೆ ಮಾಸಿಕ 1.5 ಲಕ್ಷ ಆದಾಯ ತರುತ್ತಿದೆ.

4–5 ವರ್ಷದ ಹಿಂದೆ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಆನೇಕಲ್ ತಾಲ್ಲೂಕಿನ ದಿನ್ನೂರು ಗ್ರಾಮದ ಶರ್ಮಿಳಾ ಈಗ ಐದಾರು ಮಹಿಳೆಯರಿಗೆ ಕೆಲಸ ನೀಡುವ ಉದ್ಯಮಿಯಾಗಿದ್ದಾರೆ.  

ಶಿಕ್ಷಕಿಯಾಗಿದ್ದ ಶರ್ಮಿಳಾ ಅವರನ್ನು ಕೋವಿಡ್‌ ವೇಳೆ ಕೆಲಸದಿಂದ ತೆಗೆಯಲಾಯಿತು. ಕೋವಿಡ್‌ ಲಸಿಕೆ ಪ್ರಯೋಗ ಹೆಚ್ಚಾಗಿದ್ದರಿಂದ ಆಗ ‘ಗಿನಿಪಿಗ್’ಗಳಿಗೆ ಬೇಡಿಕೆ ಇತ್ತು. ಹಾಗಾಗಿ ಗಿನಿಪಿಗ್‌ ಸಾಕಣೆಯನ್ನು ಆರಂಭಿಸಿದರು.

ADVERTISEMENT

ಕೇಂದ್ರ ಸರ್ಕಾರದ ಸಂಜೀವಿನಿ ಯೋಜನೆ ಹಾಗೂ ಸ್ಥಳೀಯ ಸ್ತ್ರೀಶಕ್ತಿ ಸಂಘಗಳಲ್ಲಿ ಸಾಲ ಪಡೆದು ₹6 ಲಕ್ಷ ವೆಚ್ಚದಲ್ಲಿ ಸಾಕಣೆಯನ್ನು ಆರಂಭಿಸಿದರು.

2020ರಲ್ಲಿ ತಮಿಳುನಾಡಿನ ಹೊಸೂರು ಪ್ರಯೋಗಾಲಯದಿಂದ 200 ಗಿನಿಪಿಗ್‌ ಮರಿ ತಂದು ಸಾಕಲಾರಂಭಿಸಿದರು. ಈಗ ಫಾರ್ಮ್‌ನಲ್ಲಿ 2,500 ಗಿನ್‌ಪಿಗ್‌ಗಳಿವೆ. ಆರಂಭದಲ್ಲಿ ತಿಂಗಳಿಗೆ ₹ 20 ಸಾವಿರ ಆದಾಯ ಬರುತ್ತಿತ್ತು. ಈಗ ವಹಿವಾಟು ₹3 ಲಕ್ಷದವರೆಗೂ ಏರಿದೆ.

ಒಂದು ಸಾವಿರ ಗಿನಿಪಿಗ್ ಸಾಕಲು ತಿಂಗಳಿಗೆ ₹1 ಲಕ್ಷ ವೆಚ್ಚವಾಗಲಿದೆ. ತಿಂಗಳಿಗೆ 400ರಿಂದ 500 ಮರಿ ಮಾರಾಟ ಆಗುತ್ತವೆ. ಸಾಕಣೆ ವೆಚ್ಚ, ನೌಕರರ ವೇತನ ಕಳೆದರೆ ಪ್ರತಿ ತಿಂಗಳು ₹1.50 ಲಕ್ಷ ಲಾಭ ಉಳಿಯುತ್ತದೆ ಎನ್ನುತ್ತಾರೆ ಶರ್ಮಿಳಾ.

ಬೂಸಾ ತಿನ್ನುತ್ತಿರುವ ಗಿನಿಪಿಗ್‌ಗಳು

ಆರಂಭದಲ್ಲಿ 200 ಮರಿ ತರಲಾಗಿತ್ತು. ಹೊಸದಾಗಿ ಮರಿಗಳನ್ನು ತಂದಿಲ್ಲ. ಇಲ್ಲಿಯೇ ಸಂತಾನೋತ್ಪತ್ತಿ ಆಗುತ್ತಿದೆ. ಒಂದು ಸಾವಿರ ಗಿನಿಪಿಗ್‌ ಬೆಳವಣಿಗೆಯಾದರೆ 400 ಮರಿ ಹಾಕುತ್ತವೆ. ಮರಿಗಳ ತೂಕ 200–300 ಗ್ರಾಂ ಆದಂತೆ ಒಂದಕ್ಕೆ ₹600ರಿಂದ ₹700ರಂತೆ ಮಾರಲಾಗುತ್ತದೆ. ಒಂದು ಮರಿ 200–300 ಗ್ರಾಂ ಬೆಳೆಯಲು 15–20 ದಿನ ಹಿಡಿಯುತ್ತದೆ.

ವೈದ್ಯಕೀಯ ಮತ್ತು ವಿಜ್ಞಾನ ಕಾಲೇಜುಗಳ ಶೈಕ್ಷಣಿಕ ವರ್ಷ ಆರಂಭದಲ್ಲಿ ಗಿನಿಪಿಗ್‌ಗಳಿಗೆ ಬೇಡಿಕೆ ಹೆಚ್ಚು. ಆಗ ಒಂದು ಮರಿ ₹800ವರೆಗೂ ಮಾರಾಟ ಆಗುತ್ತದೆ ಎಂದು ಶರ್ಮಿಳಾ ಹೇಳುತ್ತಾರೆ.

ರಾಜ್ಯದ ಪ್ರತಿಷ್ಠಿತ ಕಂಪನಿಗಳಲ್ಲದೆ ತಮಿಳುನಾಡು, ತೆಲಂಗಾಣದ ಔಷಧ ತಯಾರಿಕಾ ಕಂಪನಿ, ವೈದ್ಯ ಕಾಲೇಜು ಮತ್ತು ಪ್ರಯೋಗಾಲಯಗಳಿಗೆ ಇಲ್ಲಿಂದಲೇ ಗಿನಿಪಿಗ್‌ ಒದಗಿಸಲಾಗುತ್ತದೆ. ವಿವಿಧ ಕಂಪನಿಯವರು ಬಂದು ಗಿನಿಪಿಗ್‌ ಖರೀದಿಸುತ್ತಿದ್ದಾರೆ.

‘ಹೈದರಾಬಾದ್‌ ಮೂಲದ ಔಷಧ ಕಂಪನಿಯೊಂದು ತಿಂಗಳಿಗೆ ಎರಡು ಸಾವಿರ ಗಿನಿಪಿಗ್ ಪೂರೈಸಲು ಬೇಡಿಕೆ ಇಟ್ಟಿದೆ. ಆದರೆ, ನಮ್ಮಲ್ಲಿ ಸಾಕಣೆಗೆ ಜಾಗದ ಕೊರತೆ ಇದೆ. ಹೀಗಾಗಿ, ಎರಡೂವರೆ ಸಾವಿರ ಮರಿ‌ಯಷ್ಟೇ ಸಾಕುತ್ತಿದ್ದೇನೆ. ಉದ್ಯಮ ವಿಸ್ತರಿಸಿ, ಇನ್ನಷ್ಟು ಮಂದಿಗೆ ಕೆಲಸ ಕೊಡಬೇಕು ಎಂಬ ಆಶಯವಿದೆ’ ಎನ್ನುತ್ತಾರೆ ಶರ್ಮಿಳಾ.

ಮರಿಗಳಿಗೆ ಹಾಲು ಉಣಿಸುತ್ತಿರುವ ಗಿನಿಪಿಗ್‌
ತಂಟೆ ಮಾಡಲ್ಲ; ಮೃಧು ಸ್ವಭಾವ ಬಿಡಲ್ಲ
‘ಗಿನಿಪಿಗ್’ ತಂಟೆಕೋರ ಅಲ್ಲ. ಮೃದು ಸ್ವಭಾವದ ಮುಗ್ಧಜೀವಿಗಳು. ಗೂಡು ಬಿಟ್ಟು ಎಲ್ಲಿಯೂ ಕದಲುವುದಿಲ್ಲ. ಸೀಮೆಹಸುಗಳಿಗೆ ನೀಡುವ ಹುಲ್ಲು ಬೂಸಾ ಪೋಷಕಾಂಶ ಮಾತ್ರೆಗಳನ್ನು ಆಹಾರವಾಗಿ ನೀಡಲಾಗುತ್ತದೆ.  ಫಾರ್ಮ್‌ ಪರಿಸರದಲ್ಲಿ ಬೆಳೆಯುವ ಇವು ಹೊರಗಿನ ಹವೆಗೆ ಹೊಂದಿಕೊಳ್ಳುವುದಿಲ್ಲ. ತಾಪಮಾನವನ್ನು ತಡೆಯಲಾರವು. ಹೀಗಾಗಿ ಇವುಗಳನ್ನು ಖರೀದಿಸುವವರು ಹವಾನಿಯಂತ್ರಿತ ವಾಹನದಲ್ಲಿ ಕೊಂಡೊಯ್ಯುತ್ತಾರೆ.
ನಾಲ್ಕು ವರ್ಷ ಆಯ್ತು ಗಿನಿಪಿಗ್‌ ಸಾಕಣೆಯಿಂದ ನಷ್ಟ ಆಗಿಲ್ಲ. ಪರಿಶ್ರಮ, ಶ್ರದ್ಧೆ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಅಂದು ನನ್ನನ್ನು ಕೆಲಸದಿಂದ ತೆಗೆದಿದ್ದರು. ಇಂದು, ಈಗ ನಾನೇ ಐವರಿಗೆ ಕೆಲಸ ಕೊಟ್ಟಿದ್ದೇನೆ.
–ಶರ್ಮಿಳಾ, ಗಿನ್‌ಪಿಗ್‌ ಸಾಕಣೆ ಉದ್ಯಮಿ
ಮಹಿಳೆಯರು ಬೇಡಿಕೆ ಗಮನಿಸಿ ಉದ್ಯಮ ನಡೆಸಬೇಕು. ಮಾರುಕಟ್ಟೆಯನ್ನು ಸೃಷ್ಟಿಸಿ ತಮ್ಮದೇ ಬ್ರ್ಯಾಂಡ್‌ ರೂಪಿಸಬೇಕು. ಈ ದಿಸೆಯಲ್ಲಿ ಶರ್ಮಿಳಾ ಅವರ ಗಿನಿಪಿಗ್‌ ಸಾಕಣೆ ಉತ್ತಮ ಪ್ರಯತ್ನ.
–ಲತಾಕುಮಾರಿ, ಸಿಇಒ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.