ADVERTISEMENT

ಮಹಿಳಾ ಉದ್ಯಮಿಗಳಿಗೆ ಕಡಿಮೆ ಬಡ್ಡಿಗೆ ಸಾಲ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 15:48 IST
Last Updated 19 ನವೆಂಬರ್ 2025, 15:48 IST
ಲಕ್ಷ್ಮಿ ಹೆಬ್ಬಾಳಕರ್
ಲಕ್ಷ್ಮಿ ಹೆಬ್ಬಾಳಕರ್   

ಬೆಂಗಳೂರು:  ರಾಜ್ಯದ ಮಹಿಳೆಯರು ಸಣ್ಣ ಪ್ರಮಾಣದ ಉದ್ಯಮಗಳನ್ನು ಸ್ಥಾಪಿಸಲು ಎಲ್ಲ ಬೆಂಬಲ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಭರವಸೆ ನೀಡಿದರು. 

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ಉದ್ದಿಮೆದಾರರ ದಿನಾಚರಣೆಯ ಸಮಾರೋಪದಲ್ಲಿ ಮಾತನಾಡಿದ ಅವರು, ‘ಮಹಿಳಾ ಉದ್ಯಮಿಗಳಿಗೆ ಅಥವಾ ಸ್ವಂತ ಉದ್ಯಮ ಆರಂಭಿಸಲು ಬಯಸುವ ಮಹಿಳೆಯರಿಗೆ ಸರ್ಕಾರವು ಶೇ 3ರ ಬಡ್ಡಿ ದರದಲ್ಲಿ ₹5 ಕೋಟಿವರೆಗೆ ಸಾಲ ನೀಡುತ್ತದೆ’ ಎಂದರು.

ಮಹಿಳೆಯರ ಸಬಲೀಕರಣದ ಉದ್ದೇಶದ ‘ಗೃಹಲಕ್ಷ್ಮಿ’ ಯೋಜನೆಗೆ ಸರ್ಕಾವು ₹32,000 ಕೋಟಿ ಇರಿಸಿದೆ. ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರ ವಾರ್ಷಿಕ ₹52 ಸಾವಿರ ಕೋಟಿ‌ ಖರ್ಚು ಮಾಡುತ್ತಿದೆ ಎಂದರು.

ADVERTISEMENT

‘ನಾನು ಎರಡು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಉದ್ಯೋಗ ನೀಡಿದ್ದೇನೆ’ ಎಂದು ತಿಳಿಸಿದರು.

ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ಹಿರಿಯ ಉಪಾಧ್ಯಕ್ಷರಾದ ಸಾಯಿರಾಮ್ ಪ್ರಸಾದ್, ಉಪಾಧ್ಯಕ್ಷ ಬಿ.ಪಿ.ಶಶಿಧರ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.