ADVERTISEMENT

ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 17:53 IST
Last Updated 1 ಡಿಸೆಂಬರ್ 2022, 17:53 IST
   

ಮದ್ದೂರು (ಮಂಡ್ಯ ಜಿಲ್ಲೆ): ಪಟ್ಟಣದ ಹೊಳೇಬೀದಿಯಲ್ಲಿ ಮಹಿಳೆಯೊಬ್ಬರು ಗುರುವಾರ ರಾತ್ರಿ ತಮ್ಮ ಮೂವರು ಮಕ್ಕಳಿಗೆ ವಿಷವುಣಿಸಿ, ಬಳಿಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೊಳೇಬೀದಿ ನಿವಾಸಿ, ಕಾರ್ ಮೆಕ್ಯಾನಿಕ್ ಆಗಿರುವ ಆಖಿಲ್ ಎಂಬವರ ಪತ್ನಿ ಊಸನಾ ಕೌಸರ್ (30) ತನ್ನ ಮಕ್ಕಳಾದ ಹ್ಯಾರೀಶ್ (7), ಪುತ್ರಿಯರಾದ ಆಲಿಸಾ (4), ಫಾತಿಮಾ (2) ಅವರಿಗೆ ರಾತ್ರಿ 9ರ ವೇಳೆಗೆ ವಿಷ ಉಣಿಸಿದ್ದಾರೆ. ಮಕ್ಕಳು ಮೃತಪಟ್ಟ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಖರ ಕಾರಣ ಗೊತ್ತಾಗಿಲ್ಲ.

‘ಊಸನಾ ತುಮಕೂರು ಮೂಲದವರು. ಹತ್ತು ವರ್ಷದ ಹಿಂದೆ ಆಖಿಲ್‌ ಜೊತೆ ಮದುವೆಯಾಗಿತ್ತು. ಮೊಬೈಲ್‌ ಫೋನ್‌ಗೆ ಕರೆ ಮಾಡಿದಾಗ ಸ್ವೀಕರಿಸದಿದ್ದಕ್ಕೆ ಪತಿಯು ಮನೆಗೆ ಬಂದು ನೋಡಿದ್ದಾರೆ. ಕೂಗಿದರೂ ಹೊರಬಾರಿದ್ದಕ್ಕೆ ಅನುಮಾನಗೊಂಡು, ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಹಾಗೂ ಮಕ್ಕಳು ಸಾವಿಗೀಡಾಗಿರುವುದು ಗೊತ್ತಾಗಿದೆ. ಆತ್ಮಹತ್ಯೆಗೂ ಮುನ್ನ ಊಸನಾ ತಮ್ಮ ತಾಯಿಗೆ ಕರೆ ಮಾಡಿ, ಮದ್ದೂರಿಗೆ ಬರುವಂತೆ ಹೇಳಿದ್ದಾರೆ ಎಂದು ಗೊತ್ತಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು. ಮದ್ದೂರು ಠಾಣೆ ಪೊಲೀಸರು ಪತಿ ಆಖಿಲ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.