ADVERTISEMENT

ಸೂಕ್ತ ಪ್ರಾತಿನಿಧ್ಯಕ್ಕೆ ಆಗ್ರಹಿಸಿ ಪ್ರತ್ಯೇಕ ಶಿಕ್ಷಕಿಯರ ಸಂಘ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 9:54 IST
Last Updated 2 ಮಾರ್ಚ್ 2019, 9:54 IST

ಧಾರವಾಡ: ‘ಶಿಕ್ಷಕರ ಸಂಘದಲ್ಲಿ ಮಹಿಳೆಯರಿಗೆ ಸಿಗದ ಸೂಕ್ತ ಪ್ರಾತಿನಿಧ್ಯ ಮತ್ತು ಮಹಿಳೆಯರ ಬೇಡಿಕೆಗೆ ಸಿಗದ ಮನ್ನಣೆಯಿಂದ ಬೇಸತ್ತು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಪ್ರಾರಂಭಿಸಲಾಗಿದೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಲತಾ ಎಸ್. ಮುಳ್ಳೂರ ತಿಳಿಸಿದರು.

‘ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕಿಯರನ್ನು ಒಳಗೊಂಡ ಸಂಘ ಇದಾಗಿದ್ದು, ಕಳೆದ ಫೆ. 20ರಂದು ಬಳ್ಳಾರಿಯಲ್ಲಿ ನಡೆದ ಸಮಾರಂಭದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಈಗ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಂಘಟಿಸಲಾಗುತ್ತಿದೆ. ಹೀಗಾಗಿ ಈ ವರ್ಷದ ಅಂತ್ಯದ ವೇಳೆ 10ಸಾವಿರ ಸದಸ್ಯರ ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ರಾಜ್ಯದಲ್ಲಿ ಒಟ್ಟು ಶಿಕ್ಷಕರ ಸಂಖ್ಯೆಯಲ್ಲಿ ಶೇ 70ರಷ್ಟು ಸಂಖ್ಯೆಯಲ್ಲಿರುವ ಶಿಕ್ಷಕಿರನ್ನು ಇಂದಿಗೂ ದ್ವಿತೀಯ ದರ್ಜೆ ನಾಗರಿಕರಂತೆಯೇ ನೋಡಲಾಗುತ್ತಿದೆ. ನೆಪಮಾತ್ರಕ್ಕೆ ಕೆಳಹಂತದ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ. ಆದರೆ ಮಹಿಳೆಯಲ್ಲಿರುವ ನಾಯಕತ್ವದ ಗುಣವನ್ನು ಹೊರಹಾಕಲು ಪುರುಷ ಸಮಾಜ ಸೂಕ್ತ ಪ್ರಾತಿನಿಧ್ಯವನ್ನೇ ನೀಡುತ್ತಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಮಹಿಳೆಯರಿಂದ, ಮಹಿಳೆಯರಿಗಾಗಿಯೇ ಮತ್ತು ಮಹಿಳೆಯರಿಗೋಸ್ಕರ ಈ ಸಂಘವನ್ನು ಸ್ಥಾಪಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಮಹಿಳೆಯರಿಗಾಗಿ ಪ್ರತ್ಯೇಕ ಸಂಘ ಸ್ಥಾಪಿಸಲು ಹೊರಟಾಗ ನಮ್ಮನ್ನು ಶಿಕ್ಷಕರ ಸಂಘದಿಂದ ಹೊರಹಾಕಲಾಯಿತು. ಪ್ರತ್ಯೇಕ ಸಂಘ ಕಟ್ಟದಂತೆ ನಮ್ಮ ಮೇಲೆ ಒತ್ತಡವನ್ನೂ ತರಲಾಯಿತು. ಪ್ರಶ್ನಿಸುವವರಿಗೆ ಅಲ್ಲಿ ಉಳಿಗಾಲ ಇಲ್ಲದಂತ ಉಸಿಗಟ್ಟಿಸುವ ಪರಿಸ್ಥಿತಿ ಅಲ್ಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ವಿಧಾನ ಪರಿಷತ್ತಿನಲ್ಲಿ ಒಂದು ಸ್ಥಾನ ಮಹಿಳಾ ಶಿಕ್ಷಕ ಪ್ರತಿನಿಧಿಗಳಿಗೆ ಮೀಸಲಿಡಬೇಕು. ಶಿಕ್ಷಕಿಯರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತ ವಿಚಾರಣೆಗೆ ಮಹಿಳೆಯರನ್ನೊಳಗೊಂಡ ಸಮಿತಿ ರಚಿಸಬೇಕು. ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ಶಿಕ್ಷಕಿಯರಿಗೆ ರಾಜ್ಯ ಪ್ರಶಸ್ತಿ ನೀಡಬೇಕು. ಗ್ರಾಮೀಣ ಕೃಪಾಂಕದ ಶಿಕ್ಷಕಿಯರ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಬೇಕು. ಅಂಗವಿಕಲ ಸಹಶಿಕ್ಷಕಿಯರಿಗೆ ಬಡ್ಡಿರಹಿತ ಸಾಲ ನೀಡಬೇಕು. ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಶಿಕ್ಷಕಿಯರಿಗೆ ವಿಶೇಷ ರಜೆ ನೀಡಬೇಕು’ ಎಂಬ ಬೇಡಿಕೆಗಳನ್ನು ಸಂಘದ ವತಿಯಿಂದ ಸರ್ಕಾರಕ್ಕೆ ಸಲ್ಲಿಸಿದರು.

‘ಲೋಕಸಭಾ ಚುನಾವಣೆ ಹೊಸ್ತಿಲಲ್ಲಿದ್ದು, ಶಿಕ್ಷಕಿಯರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವ ಶಿಕ್ಷಕಿಯರಿಗೆ ಮತದಾನದ ಹಿಂದಿನ ದಿನ ಮತ್ತು ನಂತರದ ದಿನ ಒಒಡಿ ಸೌಲಭ್ಯ ಕಲ್ಪಿಸಬೇಕು. ಜತೆಗೆ ಅವರನ್ನು ಕರೆದೊಯ್ಯಲು ಸೂಕ್ತ ವಾಹನ ವ್ಯವಸ್ಥೆ ಮಾಡಬೇಕು’ ಎಂದು ಲತಾ ಮುಳ್ಳೂರು ಆಗ್ರಹಿಸಿದರು.

ಪ್ರಧಾನ ಕಾರ್ಯದರ್ಶಿ ಎಸ್‌. ಸುಮತಿ, ಪ್ರೇಮಾ ಹೆಗಡೆ, ಶಶಿಕಲಾ ಕುರಿ, ಸೀತಾ ಚಾಕಲಬ್ಬಿ, ಲಲಿತಾ ಕ್ಯಾಸನ್ನವರ, ಮಂಜುಳಾ ಕೋಳಿವಾಡ, ಆಶಾ ಬೇಗಂ ಮುನುವಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.