ADVERTISEMENT

ಮಹಿಳಾ ದಿನ: ತೋಳಹುಣಸೆಯ ಅಭಿಮಾನಿ ಅಮ್ಮಂದಿರು

ಪ್ರಕಾಶ ಕುಗ್ವೆ
Published 7 ಮಾರ್ಚ್ 2019, 20:30 IST
Last Updated 7 ಮಾರ್ಚ್ 2019, 20:30 IST
ದಾವಣಗೆರೆ ನಗರದಿಂದ 10 ಕಿ.ಮೀ. ದೂರ ಇರುವ ತೋಳಹುಣಸೆ ಗ್ರಾಮದಲ್ಲಿ ಯೋಧರ ತಾಯಂದಿರಾದ ಚಂದ್ರಮ್ಮ, ತ್ಯಾವರಿಬಾಯಿ, ರೂಪ್ಲಿಬಾಯಿ, ಜಾನಿಬಾಯಿ ಹಾಗೂ ಅಂಜನಿಬಾಯಿಪ್ರಜಾವಾಣಿ ಚಿತ್ರ: ಅನೂಪ್‌ ಆರ್. ತಿಪ್ಪೇಸ್ವಾಮಿ
ದಾವಣಗೆರೆ ನಗರದಿಂದ 10 ಕಿ.ಮೀ. ದೂರ ಇರುವ ತೋಳಹುಣಸೆ ಗ್ರಾಮದಲ್ಲಿ ಯೋಧರ ತಾಯಂದಿರಾದ ಚಂದ್ರಮ್ಮ, ತ್ಯಾವರಿಬಾಯಿ, ರೂಪ್ಲಿಬಾಯಿ, ಜಾನಿಬಾಯಿ ಹಾಗೂ ಅಂಜನಿಬಾಯಿಪ್ರಜಾವಾಣಿ ಚಿತ್ರ: ಅನೂಪ್‌ ಆರ್. ತಿಪ್ಪೇಸ್ವಾಮಿ   

ದಾವಣಗೆರೆ: ಈ ಊರಿನ ಬಹುಪಾಲು ಯುವಕರು ಸೇನೆಯಲ್ಲಿ ದುಡಿಯುತ್ತಿದ್ದಾರೆ. ಪ್ರತಿ ಮನೆಯಲ್ಲೂ ಮಿಲಿಟರಿ ಸಮವಸ್ತ್ರದಲ್ಲಿನ ಯೋಧ ಮಗನ ಭಾವಚಿತ್ರ ಎದ್ದು ಕಾಣುತ್ತದೆ. ‘ಗಡಿಯಲ್ಲಿ ಏನೂ ಆಗದಿರಲಿ ದೇವರೇ’ ಎಂಬ ಯೋಧರ ತಾಯಂದಿರ ಪ್ರಾರ್ಥನೆ ನಿತ್ಯ ಕೇಳಿಬರುತ್ತಿದೆ.

‘ಇವರು ನಮ್ಮ ಮಕ್ಕಳಲ್ಲ; ದೇಶದ ಮಕ್ಕಳು, ದೇವರ ಮಕ್ಕಳು. ದೇವರೇ ಅವರನ್ನು ಕಾಪಾಡಬೇಕು’ ಎಂದು ಮುಗ್ಧವಾಗಿ ಹೇಳುವ ಈ ತಾಯಂದಿಯರಿಗೆ ತಮ್ಮ ಮಕ್ಕಳು ಯಾವ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆಂಬುದು ತಿಳಿದಿಲ್ಲ.

‘ಮಕ್ಕಳನ್ನು ದೇಶ ಸೇವೆಗೆ ಕಳುಹಿಸಿದ್ದಕ್ಕೆ ನಮಗೆ ಹೆಮ್ಮೆ ಇದೆ. ಬಿಸಿಲು, ಚಳಿ, ಮಳೆ ಎನ್ನದೇ ದುಡಿಯುವ ಮಕ್ಕಳ ಜೀವದ ಬಗ್ಗೆ ಆತಂಕವೂ ಇದೆ’ ಎನ್ನುತ್ತಾರೆ ಯೋಧ ವೆಂಕಟೇಶ ಅವರ ತಾಯಿ, ತೋಳಹುಣಸೆ ಗ್ರಾಮ ಪಂಚಾಯಿತಿ ಸದಸ್ಯೆಯೂ ಆದ ಜಾನಿಬಾಯಿ.

ADVERTISEMENT

‘ಇಷ್ಟು ವರ್ಷಗಳ ಕಾಲ ಇಲ್ಲದ ಆತಂಕ ಈಗ ಆರಂಭವಾಗಿದೆ. ಗಡಿಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಟಿವಿಯಲ್ಲಿ ನೋಡಿ ಪ್ರತಿ ದಿನ ಭಯಪಡುತ್ತಿದ್ದೇವೆ. ಈ ಆತಂಕಕ್ಕೆ ಕೊನೆ ಯಾವಾಗ’ ಎಂದು ಅವರು ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ, ‘ಇದು ಅವರು(ಉಗ್ರರು) ಕೆಣಕಿ ಬಂದಿದ್ದು, ನಾವು ಸುಮ್ಮನಿರಲು ಸಾಧ್ಯವೇ? ತಾಯಿಯಾದ ನನಗೇ ಅಷ್ಟು ರೋಷ ಉಕ್ಕಿ ಬರುವಾಗ ದೇಶ ಸೇವೆ ಮಾಡುವ ನನ್ನ ಮಗನಿಗೆ ಹೇಗಾಗಿರಬೇಡ’ ಎಂದೂ ಅವರು ಪ್ರಶ್ನಿಸುತ್ತಾರೆ.

ಪುಲ್ವಾಮಾ ದಾಳಿ ಕುರಿತು, ‘ಅಷ್ಟೊಂದು ಯೋಧರು ಸತ್ತರಲ್ಲ, ಅವರ ಕುಟುಂಬದವರಿಗೆ ಹೇಗೆ ಆಗಿರಬೇಡ? ಹೆತ್ತ ಕರುಳಿಗೆ ಎಷ್ಟೊಂದು ಸಂಕಟ? ಒಂದು ವೇಳೆ ಯುದ್ಧ ಆದರೆ ಆಗಲಿ. ಆದರೆ, ಫಲಿತಾಂಶ ದೇವರಿಗೆ ಬಿಟ್ಟಿದ್ದು’ ಎಂದು ದೇವರ ಮೇಲೆ ಭಾರ ಹೊರಿಸಿದರು.

‘ನಾವ್ಯಾರು ಸ್ಥಿತಿವಂತರಲ್ಲ; ಒಂದು, ಅರ್ಧ ಎಕರೆ ಗದ್ದೆಗಳು ಇವೆ. ಕೆಲವರು ಕೂಲಿ ಮಾಡುತ್ತೇವೆ. ಮಕ್ಕಳು ಸೈನಿಕರಾಗಿ ಕೆಲಸ ಮಾಡುವುದರಿಂದ ನಮ್ಮ ಹೊಟ್ಟೆ–ಬಟ್ಟೆಗೆ ತೊಂದರೆ ಇಲ್ಲ’ ಎಂದು ಯೋಧ ಪ್ರಕಾಶ್ ತಾಯಿ ಅಂಜನಿಬಾಯಿ ಆರ್ಥಿಕ ಸ್ಥಿತಿಯ ವಿವರಣೆ ನೀಡಿದರು.

‘ಮೈದುನ, ಮಗ, ಅಳಿಯ ಮೂವರೂ ಬಹಳ ವರ್ಷಗಳಿಂದ ಸೈನದಲ್ಲಿದ್ದಾರೆ. ದೇಶದ ಗಡಿಯಲ್ಲಿನ ಇತ್ತೀಚಿನ ಪರಿಸ್ಥಿತಿ ನೋಡಿ ಪ್ರತಿ ನಿತ್ಯ ಭಯ ಆಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು ಚಂದ್ರಮ್ಮ.

‘ತೋಳಹುಣಸೆ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 2,000 ಜನಸಂಖ್ಯೆ ಇದೆ. ಈ ಗ್ರಾಮ ಒಂದರಲ್ಲೇ 130ಕ್ಕೂ ಹೆಚ್ಚು ಯುವಕರು ಸೈನದಲ್ಲಿದ್ದಾರೆ. ಅದರಲ್ಲಿ ಲಂಬಾಣಿ ಸಮುದಾಯದವರೇ ಹೆಚ್ಚು. ಪರಿಶಿಷ್ಟ ಜಾತಿ, ಲಿಂಗಾಯತರು, ಮುಸ್ಲಿಂರೂ ಯೋಧರಾಗಿದ್ದಾರೆ’ ಎಂದು ಹೆಮ್ಮೆಯಿಂದ ಹೇಳಿದರು ಯೋಧ ಶಿವಕುಮಾರ ನಾಯ್ಕ ಅವರ ತಾಯಿ ತ್ಯಾವರಿಬಾಯಿ ಹಾಗೂ ಯೋಧ ಉಮೇಶ್‌ ಅವರ ತಾಯಿ ರೂಪ್ಲಿಬಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.