ADVERTISEMENT

ಎಲ್ಲ ಸೈನಿಕರೂ ಮಕ್ಕಳಿದ್ದಂತೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 19:28 IST
Last Updated 7 ಮಾರ್ಚ್ 2019, 19:28 IST
ಸಿರಾಜುನ್ನೀಸ ಅವರೊಂದಿಗೆ ಸಾದಿಕ್‌
ಸಿರಾಜುನ್ನೀಸ ಅವರೊಂದಿಗೆ ಸಾದಿಕ್‌   

ತುಮಕೂರು: ‘ದೇಶದಲ್ಲಿ ಎಲ್ಲೇ ಸೇನೆಯ ಕಾರ್ಯಾಚರಣೆ ನಡೆದರೂ ಕಾಶ್ಮೀರದಲ್ಲೇ ಆಯಿ ತೇನೊ ಅನ್ನಿಸುತ್ತದೆ. ಯಾರೋ ಸೈನಿಕ ಹುತಾತ್ಮನಾದರೂ ಕಣ್ಣೀರು ಹರಿಯುತ್ತದೆ. ಮಗ ದೇಶ ಸೇವೆಗಾಗಿ ಹೊರಟು ನಿಂತಾಗ ಇದ್ದ ಆತಂಕ ಇನ್ನೂ ದೂರವಾಗಿಲ್ಲ. ಪ್ರತಿ ದಿನವೂ ಆತನ ಫೋನ್‌ಗಾಗಿ ಕಾಯುತ್ತಿರುತ್ತದೆ ಈ ಮನ’ ಎಂದು ಭಾವುಕರಾದರು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ತುಮಕೂರಿನ ನಾಯಕ್‌ ಎಂ.ಸಾದಿಕ್‌ ಅವರ ತಾಯಿ ಸಿರಾಜುನ್ನೀಸ.

ಪುಲ್ವಾಮದಲ್ಲಿ ಉಗ್ರರ ದಾಳಿ ನಡೆದಾಗ ಹತ್ತೇ ಕಿ.ಮೀ ದೂರದಲ್ಲಿದ್ದ ಸಾದಿಕ್‌ (ಕುಲ್ಗಾಮ್‌ ಜಿಲ್ಲೆ) ತಕ್ಷಣ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಘಟನೆ ಬಗ್ಗೆ ತಿಳಿದ ತಕ್ಷಣ ಕುಟುಂಬದವರು ಆತಂಕ, ದಿಗ್ಭ್ರಮೆಯಲ್ಲಿ ಮುಳುಗಿದ್ದರು.

‘ಕರೆ ಮಾಡಿದರೂ ಮಗ ಪ್ರತಿಕ್ರಿಯಿಸದಿದ್ದರಿಂದ ಇನ್ನಷ್ಟು ಆತಂಕ ಶುರುವಾಯಿತು. ಎರಡು ಗಂಟೆ ಬಳಿಕ ಮಗನೇ ಕರೆ ಮಾಡಿ ಸಮಾಧಾನ ಹೇಳಿದ. ಆದರೂ ಘಟನೆಯಲ್ಲಿ ಅದೆಷ್ಟೋ ಮಕ್ಕಳ ರಕ್ತ ಹರಿದಿದ್ದನ್ನು ಕಂಡು ಕಣ್ಣೀರು ತಡೆಯಲಾಗಲಿಲ್ಲ. ಮನೆಯಲ್ಲಿ ಮೂರು ದಿನ ಅಡುಗೆ ಮಾಡಲಿಲ್ಲ. ಟಿ.ವಿ ಮುಂದೆಯೆ ಕುಳಿತಿದ್ದೆವು. ಎಲ್ಲ ತಾಯಂದಿರ ಹೃದಯ ಒಂದೇ ಅಲ್ಲವೇ’ ಎಂದು ಕಣ್ಣಾಲಿಗಳನ್ನು ಒರೆಸಿಕೊಂಡರು ತಾಯಿ.

ADVERTISEMENT

‘ಇಂಥ ಆತಂಕದ ಕಾರ್ಮೋಡ ಯೋಧರ ಪ್ರತಿ ಕುಟುಂಬದಲ್ಲೂ ಕವಿದಿರುತ್ತದೆ. ಪ್ರತಿ ದಿನ ಅವರಿಗೆ ಧೈರ್ಯ ತುಂಬುವ ಕೆಲಸ ನಮ್ಮದು’ ಎನ್ನುತ್ತ ತಾಯಿಯನ್ನು ಅಪ್ಪಿಕೊಂಡರು ರಜೆ ಮೇಲೆ ಮನೆಗೆ ಬಂದಿರುವ ಸಾದಿಕ್‌. ಸಾದಿಕ್‌ 16 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭಯೋತ್ಪಾದನೆ ನಿಗ್ರಹ ದಳದಲ್ಲಿ ಪ್ರಮುಖವಾಗಿ ಕಾರ್ಯ ನಿರ್ವಹಿಸಿರುವ ಅವರು ಈಚೆಗೆ ಗಣರಾಜ್ಯೋತ್ಸವದ ದಿನದಂದು ‘ಸೇನಾ ಮೆಡಲ್‌’ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.