ADVERTISEMENT

ಅಂಗಾರ ಮಂತ್ರಿ ಸ್ಥಾನಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಮಹಿಳೆ!

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 2:17 IST
Last Updated 15 ಜನವರಿ 2021, 2:17 IST
ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಸುಳ್ಯ ಶಾಸಕ ಎಸ್‌. ಅಂಗಾರ
ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಸುಳ್ಯ ಶಾಸಕ ಎಸ್‌. ಅಂಗಾರ    

ಸುಳ್ಯ: ರಾಜ್ಯ ಸಂಪುಟ ವಿಸ್ತರಣೆ ಆಗುವ ಸುದ್ದಿ ತಿಳಿದು, ತಾಲ್ಲೂಕಿನ ಮಹಿಳೆಯೊಬ್ಬರು ಸುಳ್ಯದ ಶಾಸಕ ಎಸ್‌. ಅಂಗಾರ ಅವರಿಗೆ ಸಚಿವ ಸ್ಥಾನ ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.

ಕೊಡಿಯಾಲ ನಿವಾಸಿ ಕುಂಟುಪುಣಿ ಹಾಲು ಉತ್ಪಾದಕ ಸೊಸೈಟಿ ನಿರ್ದೇಶಕಿ ನೀರಜಾಕ್ಷಿ ಅವರು ಪ್ರಧಾನಿ ನರೇದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಅಂಗಾರ ಅವರು ಶಾಸಕರಾದ ಬಳಿಕ ಮೂಲ ಸೌಕರ್ಯಗಳು ಗ್ರಾಮಾಂತರ ಪ್ರದೇಶಕ್ಕೂ ತಲುಪುವಂತಾಗಿವೆ. ಅವರಿಗೆ ಸಚಿವ ಪದವಿ ನೀಡುವಂತೆ ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

ADVERTISEMENT

ಪ್ರಧಾನಿಗೆ ಬರೆದ ಪತ್ರದ ಪ್ರತಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಸಿಎಂ ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಅವರಿಗೂ ರವಾನೆ ಮಾಡಿದ್ದರು.

‘ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಾಗಲೆಲ್ಲ ಅಂಗಾರ ಅವರು ಮಂತ್ರಿಯಾಗುತ್ತಾರೆ ಎಂಬ ಸುದ್ದಿಗಳು ಹಬ್ಬಿಕೊಳ್ಳುತ್ತಿದ್ದವು. ಆದರೆ ಅವರಿಗೆ ಮಂತ್ರಿ ಪದವಿ ಮರೀಚಿಕೆಯಾಗಿಯೇ ಉಳಿದು ಹೋಗಿತ್ತು. ಈ ಕಾರಣಕ್ಕೆ ಈ ಬಾರಿ ಅಂಗಾರ ಅವರಿಗೆ ಮಂತ್ರಿ ಸ್ಥಾನ ನೀಡಲೇಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೆ’ ಎಂದು ನೀರಜಾಕ್ಷಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.