ADVERTISEMENT

ಕೋವಿಡ್ 19 ವಿರುದ್ಧ ಸಮರ ಭಾರತಕ್ಕೆ ವಿಶ್ವದ ಮೆಚ್ಚುಗೆ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 12:33 IST
Last Updated 30 ಏಪ್ರಿಲ್ 2020, 12:33 IST
ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್
ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್   

ಬೆಂಗಳೂರು: ಕೋವಿಡ್‌–19 ತಡೆಗಟ್ಟಲು ಭಾರತ ಕೈಗೊಂಡ ಕಠಿಣ ಕ್ರಮಗಳಿಗೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಲಾಕ್‌ಡೌನ್‌, ಕ್ವಾರಂಟೈನ್‌, ರೋಗ ತಪಾಸಣೆ, ವೈರಸ್ ಹರಡುವಿಕೆ ತಡೆ ಮತ್ತು ಚಿಕಿತ್ಸೆಯ ವಿಚಾರದಲ್ಲಿ ಭಾರತ ಇತರ ದೇಶಗಳಿಗಿಂತಲೂ ಮುಂಚೂಣಿಯಲ್ಲಿದೆ ಎಂದು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಹೇಳಿದ್ದಾರೆ.

‘ಪ್ರಜ್ಞಾ ಪ್ರವಾಹ’ ಕರ್ನಾಟಕ ಘಟಕ ಗುರುವಾರ ಏರ್ಪಡಿಸಿದ್ದ, ‘ಕೊರೊನಾ ವಿರುದ್ಧ ಭಾರತದ ಹೋರಾಟ ಮತ್ತು ಮುಂದೆ ಬರುವ ಸವಾಲುಗಳಿಗೆ ಕೇಂದ್ರ ಸರ್ಕಾರದ ಸನ್ನದ್ಧತೆ’ ವಿಷಯದ ಕುರಿತು ಅವರು ಮಾತನಾಡಿದರು.

ಜಗತ್ತಿನ ಬಲಾಢ್ಯ ದೇಶಗಳಾದ ಅಮೆರಿಕಾ, ಬ್ರೆಜಿಲ್‌, ಸ್ಪೇನ್‌, ಇಟಲಿ, ಲಂಡನ್‌ ಮತ್ತು ಫ್ರಾನ್ಸ್‌ಗಳಲ್ಲಿ ಸೋಂಕಿತರ ಸಂಖ್ಯೆ ಲಕ್ಷ ದಾಟಿದ್ದರೆ, ಭಾರತದಲ್ಲಿ ಮಾರ್ಚ್‌ನಲ್ಲಿ ಸೋಂಕಿತರ ಸಂಖ್ಯೆ 200 ದಾಟಿತ್ತು. ಅದರ ತೀವ್ರತೆ ಅರಿತ ಕೇಂದ್ರ ಸರ್ಕಾರ ದೇಶದೊಳಗೆ ಮಾತ್ರವಲ್ಲದೆ, ಸಾರ್ಕ್‌ ದೇಶಗಳ ನೆರವಿಗೆ ಮುಂದಾಯಿತು. ವಿದೇಶಗಳಲ್ಲಿ ನೆಲೆಸಿದ್ದ ಭಾರತಿಯರನ್ನು ಕರೆತರುವ ಕೆಲಸ ಮಾಡಿತು, ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೋವಿಡ್‌ ವಿರುದ್ಧ ಸಂಘಟಿತ ಹೋರಾಟಕ್ಕೆ ಸಜ್ಜುಗೊಳಿಸಲಾಯಿತು ಎಂದು ಹೇಳಿದರು.

ADVERTISEMENT

ಕೊರೊನಾ ಕಾರಣದಿಂದ ಭಾರತೀಯ ವೈದ್ಯಕೀಯ ಕ್ಷೇತ್ರಗಳಲ್ಲಿ ಅನೇಕ ಸಂಶೋಧನೆಗಳಿಗೆ ಅವಕಾಶ ನೀಡಲಾಗಿದೆ. ಕೊರೊನಾ ಪರೀಕ್ಷಾ ಕಿಟ್‌ಗಳು ವಿಶ್ವ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದಾಗ ಐಐಟಿ ದೆಹಲಿ ಸೇರಿದಂತೆ ಹಲವು ಸಂಶೋಧನಾ ಸಂಸ್ಥೆಗಳು ಪರೀಕ್ಷಾ ಕಿಟ್‌ಗಳ ಅಭಿವೃದ್ಧಿಗೆ ಮುಂದಾಗಿವೆ. ಕೋವಿಡ್‌–19 ಔಷಧ ಕಂಡು ಹಿಡಿಯಲು ಜೈವಿಕ ತಂತ್ರಜ್ಞಾನ ಇಲಾಖೆ ಕ್ಯಾಂಡಿಲಾ ಇಂಡಿಯಾ ಲಿಮಿಟೆಡ್‌, ಸೆರೆಮನ್‌ ಚ್ಯೂಟ್‌ ಮತ್ತು ಭಾರತ್‌ ಲ್ಯಾಬ್ಸ್‌ಗಳಿಗೆ ಹಣಕಾಸಿನ ನೆರವು ನೀಡಿದೆ ಎಂದು ಹೇಳಿದರು.

ಬಡವರಿಗಾಗಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 20 ಕೋಟಿ ಜನಧನ ಖಾತೆಗಳಿಗೆ ತಲಾ ₹500 ರಂತೆ 3 ತಿಂಗಳು ಸಂದಾಯ, ಕಿಸಾನ್‌ ಸಮ್ಮಾನ್‌ ನಿಧಿಯ ಮೊದಲ ಕಂತು ₹2,000 ಗಳನ್ನು 8 ಕೋಟಿ ರೈತರ ಖಾತೆಗಳಿಗೇ ಪಾವತಿ ಮಾಡಲಾಗಿದೆ. 8 ಕೋಟಿ ಕುಟುಂಬಗಳಿಗೆ ಉಜ್ವಲಾ ಸಿಲಿಂಡರ್‌ಗಳನ್ನು ಮೂರು ತಿಂಗಳು ಉಚಿತವಾಗಿ ನೀಡಲಾಗಿದೆ. 2.8 ಕೋಟಿ ಅಂಗವಿಕಲರು, ವಿಧವೆಯರು, ಹಿರಿಯ ನಾಗರಿಕರಿಗೆ ಹೆಚ್ಚುವರಿ ಮಾಸಿಕ ಪಿಂಚಣಿ ₹1,500 ಗಳನ್ನು ಮೂರು ತಿಂಗಳು ನೀಡಲಾಗುತ್ತಿದೆ, ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ ತಲಾ ₹1,500 ಸಹಾಯಧನ ಪಾವತಿಸಲಾಗುತ್ತಿದೆ ಎಂದರು.

ಒಟ್ಟು ₹31,000 ಕೋಟಿ ಹಣವನ್ನು ಫಲಾನುಭವಿಗಳ ಖಾತೆಗೇ ನೇರವಾಗಿ ಜಮೆ ಮಾಡಲಾಗಿದೆ. ಅಲ್ಲದೆ, ಪ್ರತಿ ರಾಜ್ಯಕ್ಕೂ ₹15,000 ಕೋಟಿ ಅನುದಾನವನ್ನು ಆರೋಗ್ಯ ಸೌಲಭ್ಯ ಬಳಕೆ ಮತ್ತು ಸುಧಾರಣೆಗೆ ಒತ್ತು ನೀಡಲು ಬಿಡುಗಡೆ ಮಾಡಲಾಗಿದೆ ಎಂದು ಸಂತೋಷ್‌ ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.