ADVERTISEMENT

ಜಲಾನಯನ ಪುನಶ್ಚೇತನಕ್ಕೆ ವಿಶ್ವಬ್ಯಾಂಕ್ ಸಾಲ

20 ಜಿಲ್ಲೆಗಳ ಆಯ್ದ ತಾಲ್ಲೂಕುಗಳಲ್ಲಿ ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 18:34 IST
Last Updated 3 ಸೆಪ್ಟೆಂಬರ್ 2020, 18:34 IST
   

ಬೆಂಗಳೂರು: ವಿಶ್ವಬ್ಯಾಂಕ್‌ನಿಂದ ಸಾಲ ಪಡೆದು ರಾಜ್ಯದ 20 ಜಿಲ್ಲೆಗಳ ಆಯ್ದ ತಾಲ್ಲೂಕುಗಳಲ್ಲಿ ಜಲಾನಯನ ಪ್ರದೇಶಗಳ ಪುನಶ್ಚೇತನ ಕಾರ್ಯಕ್ರಮ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸುಮಾರು ₹600 ಕೋಟಿ ವೆಚ್ಚದ ಈ ಯೋಜನೆಗೆ ರಾಜ್ಯ ಸರ್ಕಾರ ₹180 ಕೋಟಿ ಭರಿಸಲಿದ್ದು, ವಿಶ್ವ
ಬ್ಯಾಂಕ್‌ ₹420 ಕೋಟಿ ಸಾಲ ನೀಡಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬರಪೀಡಿತ ಪ್ರದೇಶಗಳೆಂದೇ ಹಣೆಪಟ್ಟಿ ಕಟ್ಟಿಸಿಕೊಂಡಿರುವ ಕೋಲಾರ, ಬಾಗೇಪಲ್ಲಿ, ಚಳ್ಳಕೆರೆ, ಶಿಕಾರಿಪುರ, ಗುಂಡ್ಲುಪೇಟೆ, ಹರಪನಹಳ್ಳಿ, ಶಿರಾ, ಅರಸಿಕರೆ, ಕಡೂರು, ಬೈಲಹೊಂಗಲ, ಅಥಣಿ, ಹಿರೇಕೆರೂರು, ಹುನಗುಂದ, ಕುಂದಗೋಳ, ಬಸವನ ಬಾಗೇವಾಡಿ, ರೋಣ, ಜೀವರ್ಗಿ, ಬಸವಕಲ್ಯಾಣ, ಮಾನ್ವಿ, ಯಲಬುರ್ಗಾ, ಶಹಾಪುರ ತಾಲ್ಲೂಕುಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು.

ADVERTISEMENT

ಸುಮಾರು 10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಸಮೀಕ್ಷೆ ನಡೆಸಿ 2020–21 ರಿಂದ 2026–27 ರ ಅವಧಿಯಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಘಟನೋತ್ತರ ಅನುಮೋದನೆ: ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರ, ಮೊದಲ ಹಂತದಲ್ಲಿ 276 ಪಬ್ಲಿಕ್‌ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳ ಆರಂಭಕ್ಕೆ ಸಂಪುಟ ಘಟನೋತ್ತರ ಅನುಮೋದನೆ ನೀಡಿತು.

ಅಗತ್ಯವಿರುವ ಮೂಲಸೌಕರ್ಯಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಶಿಕ್ಷಣ ನೀಡಲು ಡಿ.ಇಡಿ ಆದವರಿಗೆ ಮಾಂಟೆಸ್ಸರಿ ತರಬೇತಿ ನೀಡಲಾಗುತ್ತಿದೆ. ಶಿಕ್ಷಕರಿಗೆ ₹7,500 ಮತ್ತು ಆಯಾಗಳಿಗೆ ₹5,000 ಗೌರವ ಸಂಭಾವನೆ ನೀಡಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.

ಹಾವೇರಿ, ಯಾದಗಿರಿಗೆ ವೈದ್ಯಕೀಯ ಕಾಲೇಜು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಯ ಕೇಂದ್ರ ಪುರಸ್ಕೃತ ಯೋಜನೆಯಡಿ ಹಾವೇರಿ ಮತ್ತು ಯಾದಗಿರಿಯಲ್ಲಿ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ ₹327.46 ಕೋಟಿ ನೀಡಲಾಗುವುದು ಎಂದು ಅವರು ಹೇಳಿದರು.

700 ಅಂಬುಲೆನ್ಸ್‌ಗಳ ಸರ್ವೀಸ್‌‌ಗೆ ಟೆಂಡರ್‌: ಆರೋಗ್ಯ ಇಲಾಖೆಯ 108 ಅಂಬುಲೆನ್ಸ್‌ಗಳನ್ನು ಸರ್ವೀಸ್‌ ಮಾಡಿ ಸುಸ್ಥಿತಿಯಲ್ಲಿ ಇರಿಸಲು ಟೆಂಡರ್‌ ಕರೆಯಲು ತೀರ್ಮಾನಿಸಲಾಗಿದೆ. ಒಟ್ಟು 700 ಅಂಬುಲೆನ್ಸ್‌ಗಳಿವೆ. ಇವುಗಳ ಸರ್ವೀಸ್‌ಗೆ ಟೆಂಡರ್‌ ಕರೆಯುವಂತೆ ನ್ಯಾಯಾಲಯ ಸೂಚಿಸಿದೆ ಮಾಧುಸ್ವಾಮಿ ಹೇಳಿದರು.

ಜೋಗ್‌ ಅಭಿವೃದ್ಧಿ: ಬಿಆರ್‌ಎಸ್‌ ಯೋಜನೆ ರದ್ದು

ಶಿವಮೊಗ್ಗ ಜಿಲ್ಲೆ ಜೋಗ ಜಲಪಾತದ ಅಭಿವೃದ್ಧಿಗೆ ಬಿಆರ್‌ಎಸ್‌ (ಬಿ.ಆರ್‌.ಶೆಟ್ಟಿ) ಸಂಸ್ಥೆಗೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸುವ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ.

ಈ ಹಿಂದೆ ₹450 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿತ್ತು. ಆದರೆ, ಅವರು ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಲಿಲ್ಲ. ಈಗ ಕರ್ನಾಟಕ ವಿದ್ಯುತ್‌ ನಿಗಮವೇ (ಕೆಪಿಸಿ) ₹120 ಕೋಟಿ ವೆಚ್ಚದಲ್ಲಿ, ರೋಪ್‌ವೇ, ಉದ್ಯಾನ, ಜಲಕ್ರೀಡೆ, ಕೆಫೆಟೇರಿಯಾ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ದುಪ್ಪಟ್ಟು ದಂಡ ವಸೂಲಿಗೆ ಒಪ್ಪಿಗೆ

ಸಾಂಕ್ರಾಮಿಕ ಇರುವ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಯಾರಾದರೂ ಹಾನಿ ಮಾಡಿದರೆ, ಹಾನಿಯಾದ ಮೊತ್ತದ ದುಪ್ಪಟ್ಟು ದಂಡ ವಸೂಲಿಗೆ ನ್ಯಾಯಾಲಯಕ್ಕೆ ಅಧಿಕಾರ ನೀಡುವ ಮಸೂದೆಗೆ ಒಪ್ಪಿಗೆ ನೀಡಲಾಗಿದೆ.ಮುಂಬ
ರುವ ಅಧಿವೇಶನದಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ತಿದ್ದುಪಡಿ ಮಸೂದೆ ಮಂಡಿಸಲು ಅನುಮೋದನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.