ನಾ. ಡಿಸೋಜ ಅವರದ್ದು ಸೌಮ್ಯ ಸ್ವಭಾವ. ಅವರಿಗೆ ಸ್ವಲ್ಪವೂ ಸ್ವಪ್ರತಿಷ್ಠೆ ಎನ್ನುವುದೇ ಇರಲಿಲ್ಲ. ಜನಪ್ರಿಯತೆ ಬಂದಮೇಲೆ ಎಷ್ಟೋ ಸಾಹಿತಿಗಳಿಗೆ ಒಂದು ಬಗೆಯ ಹಟ ಇರುತ್ತದೆ; ಅವರಿಗೆ ಅದೂ ಇರಲಿಲ್ಲ.
ಅವರು ಮನ್ವಂತರದ ಸಾಹಿತಿ. ಅತಿ ಗಂಭೀರವೂ ಅಲ್ಲದ, ಜನಪ್ರಿಯತೆಯ ಹಂಗಿಗೆ ಬೀಳದ ಸಾಹಿತ್ಯ ಅವರದ್ದು.
ಅವರು ಲೋಕೋಪಯೋಗಿ ಇಲಾಖೆಯಲ್ಲಿ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ನಿಗದಿ ಮಾಡುವ ಕೆಲಸದಲ್ಲಿದ್ದವರು. ಹೀಗಾಗಿ ಸ್ವಾನುಭವವೇ ಅವರಿಗೆ ಸಾಕಷ್ಟು ಸಾಹಿತ್ಯದ್ರವ್ಯವನ್ನು ಒದಗಿಸಿಕೊಟ್ಟಿತ್ತು. ಅಲ್ಲದೆ, ಕ್ರೈಸ್ತ ಸಮುದಾಯದಿಂದ ಬಂದವರಲ್ಲಿಯೂ ಅವರು ಮುಖ್ಯವಾದ ಲೇಖಕ.
ಅವರ ‘ದ್ವೀಪ’ ಕಾದಂಬರಿಯನ್ನು ಓದಿದ ಮೇಲೆ ನನಗೆ ರೂಪಕದ ಮೂಲಕ ಅದನ್ನು ಸಿನಿಮಾ ಆಗಿಸಬಹುದು ಎನ್ನಿಸಿತು. ನಾನು ಅದನ್ನು ಆಧರಿಸಿ ಚಿತ್ರಕತೆ ಸಿದ್ಧಪಡಿಸಿಕೊಂಡು ಹೋದಮೇಲೆ ಅವರಿಗೆ ಅದು ಹಿಡಿಸಿತ್ತು. ಬರೀ ಕಾದಂಬರಿಯ ದ್ರವ್ಯವನ್ನು ಯಥಾವತ್ತಾಗಿ ಇಟ್ಟುಕೊಂಡು ಚಿತ್ರಕತೆ ಮಾಡಿರಲಿಲ್ಲ. ಅವರದ್ದೇ ‘ನೀರಿನ ಮಟ್ಟ ಅಳೆಯುವ ಮನುಷ್ಯ’ ಎಂಬ ಸಣ್ಣಕತೆಯೊಂದರ ಅಂಶವನ್ನೂ ನಾನು ಸೇರಿಸಿಕೊಂಡಿದ್ದೆ. ಮಳೆ ನಕ್ಷತ್ರಗಳನ್ನು ಇಟ್ಟುಕೊಂಡು ಅಧ್ಯಾಯಗಳಾಗಿ ಚಿತ್ರಕತೆ ಸಿದ್ಧಪಡಿಸಿದ್ದೆ. ಅದಕ್ಕೆ ಪೂರಕವಾಗಿ ಕೆಲವು ಗಾದೆಮಾತುಗಳನ್ನು ಬಳಸಿಕೊಳ್ಳಬೇಕಿತ್ತು. ಅವನ್ನೂ ಅವರೇ ನನಗೆ ಕೊಟ್ಟಿದ್ದರು.
ಸಾಗರದಲ್ಲಿಯೇ ಚಿತ್ರೀಕರಣ ಮಾಡಿದೆವು. ಲೊಕೇಷನ್ ನೋಡಲು ಅವರು ಅಥವಾ ಕೆ.ವಿ. ಸುಬ್ಬಣ್ಣ ಇಬ್ಬರೂ ಅಥವಾ ಇಬ್ಬರಲ್ಲಿ ಒಬ್ಬರು ನಮ್ಮೊಡನೆ ಬರುತ್ತಿದ್ದರು. ಸಾಗರದ ಈ ಕಾಲದ ಮಳೆಯ ಆರ್ಭಟದ ವಿಷಯ ಅವರಿಗೆ ಚೆನ್ನಾಗಿ ಗೊತ್ತಿದ್ದರಿಂದ ನನಗೂ ಅನುಕೂಲವಾಯಿತು.
ಸಿನಿಮಾ ತಯಾರಾದ ಮೇಲೆ ಸಾಗರಲ್ಲಿಯೇ ಒಂದು ಪ್ರದರ್ಶನ ಆಯೋಜಿಸಿದ್ದೆವು ಆಗ ಅವರು ಸಿನಿಮಾ ಮಾಧ್ಯಮವು ಮೂಲ ಕೃತಿಯ ವಿಸ್ತರಣೆ ಎನ್ನುವುದನ್ನು ಮುಕ್ತವಾಗಿ ಒಪ್ಪಿಕೊಂಡಿದ್ದರು. ಕತೆಯಲ್ಲಿ ಬರೆ ದಂತೆಯೇ ಸಿನಿಮಾ ಇರಬೇಕು ಎಂಬ ತುಸುವೂ ಹಟ ಅವರಿಗೆ ಇರಲಿಲ್ಲ.
ಅವರ ಸಾಹಿತ್ಯದಲ್ಲಿ ಸಿನಿಮಾ ಮಾಡಬಲ್ಲ ಸಾಕಷ್ಟು ಅಂಶಗಳಿವೆ. ‘ದ್ವೀಪ’ ಸಿನಿಮಾದಲ್ಲಿ ನಾಲ್ಕು ಮುಖ್ಯ ಪಾತ್ರಗಳು; ಐದನೇ ಪಾತ್ರ ಮಳೆ ಎಂದು ಹೇಳಿದಾಗ ಅವರು ಖುಷಿಪಟ್ಟಿದ್ದರು.
ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ನಾನು ಭೇಟಿ ಮಾಡಲು ಹೋಗಿದ್ದೆ. ನಾನು ಬರುವ ವಿಷಯ ತಿಳಿದು, ಅವರು ನನ್ನನ್ನು ಸ್ವಾಗತಿಸಲೆಂದೇ ಹೊರಗೆ ಕಾಯುತ್ತಿದ್ದರು. ಕಡಿಮೆ ಮಾತಿನ ಅವರದ್ದು ಅಷ್ಟು ಆತ್ಮೀಯವಾದ ವ್ಯಕ್ತಿತ್ವ.
‘ಯಾವುದೇ ಬಿಗುಮಾನವಿಲ್ಲದ, ಒಳ–ಹೊರಗು ಇಲ್ಲದ, ಪಾರದರ್ಶಕ ವ್ಯಕ್ತಿತ್ವ ಅವರದ್ದು’ ಎಂದು ಕೆ.ವಿ. ಸುಬ್ಬಣ್ಣ ಒಂದು ಕಡೆ ಬರೆದಿದ್ದಾರೆ. ಈ ಅಭಿಪ್ರಾಯ ನನ್ನದೂ ಹೌದು.
ನಿರೂಪಣೆ- ವಿಶಾಖ ಎನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.