ADVERTISEMENT

₹23 ಲಕ್ಷ ಮನೆ ಬಾಡಿಗೆ ಪಾವತಿಗೆ ಮುಂದಾದ ಯಶ್

ಬಿ.ಎಸ್.ಷಣ್ಮುಖಪ್ಪ
Published 2 ಜನವರಿ 2019, 6:48 IST
Last Updated 2 ಜನವರಿ 2019, 6:48 IST
   

ಬೆಂಗಳೂರು: ಹೈಕೋರ್ಟ್‌ ವಿಧಿಸಿದ್ದ ಗಡುವಿನ ಅನುಸಾರ ಚಿತ್ರನಟ ಯಶ್‌ ಅವರ ಕುಟುಂಬ ಸದ್ಯ ವಾಸಿಸುತ್ತಿರುವ ಮನೆಯ ಬಾಡಿಗೆ ಬಾಕಿ ಮೊತ್ತ ₹23 ಲಕ್ಷವನ್ನು ಮಾಲೀಕರಿಗೆ ಪಾವತಿಸಲು ಸಜ್ಜಾಗಿದೆ.

‘ನಗರದ ಬನಶಂಕರಿ ಮೂರನೇ ಹಂತದ ಮೂರನೇ ಬ್ಲಾಕ್‌ನ 6ನೇ ಕ್ರಾಸ್‌ಲ್ಲಿ 30X40ರ ಅಳತೆಯಲ್ಲಿರುವ ಮನೆಯನ್ನು ಖಾಲಿ ಮಾಡಲು ನಿರಾಕರಿಸಿ ಕೋರ್ಟ್‌ ಮೆಟ್ಟಿಲೇರಿದ್ದ ಯಶ್‌ ಅವರ ತಾಯಿ ಎ.ಪುಷ್ಪಾ, ಬಾಕಿ ಮೊತ್ತದ ಡಿ.ಡಿಯನ್ನು (ಡಿಮ್ಯಾಂಡ್‌ ಡ್ರಾಫ್ಟ್‌) ಕೊಡಲಿದ್ದಾರೆ. ಅಂತೆಯೇ 2019ರ ಮಾರ್ಚ್‌ 31ರೊಳಗೆ ಮನೆಯನ್ನು ಖಾಲಿ ಮಾಡಲಿದ್ದಾರೆ’ ಎಂದು ಮನೆಯ ವಾರಸುದಾರರ ಪರ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ಹಿರಿಯ ವಕೀಲ ಎಂ.ಟಿ.ನಾಣಯ್ಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಕರಣವೇನು?: ವಿವಾದಿತ ಮನೆಯ ಮಾಲೀಕರಾದ ಎಂ.ಮುನಿಪ್ರಸಾದ್‌ ಮತ್ತು ವನಜಾ ದಂಪತಿ ಇಬ್ಬರೂ ವೈದ್ಯರು. ಇವರಿಬ್ಬರ ಜಂಟಿ ಹೆಸರಿನಲ್ಲಿರುವ ಈ ಮನೆಯಲ್ಲಿ ಯಶ್ ಕುಟುಂಬ 2010ರ ಅಕ್ಟೋಬರ್‌ನಿಂದ ತಿಂಗಳಿಗೆ ₹ 40 ಸಾವಿರದಂತೆ ಬಾಡಿಗೆ ಪಾವತಿಸಿ ವಾಸ ಮಾಡುತ್ತಿದೆ.

ADVERTISEMENT

‘ಮನೆ ಬಿಟ್ಟುಕೊಡಿ’ ಎಂದು ಮಾಲೀಕರು ಯಶ್‌ ಕುಟುಂಬಕ್ಕೆ 2015ರಲ್ಲಿ ಸೂಚಿಸಿದ್ದರು. ತಗಾದೆ ಬಗೆ ಹರಿಯದೇ ಮುನಿಪ್ರಸಾದ್ ಮತ್ತು ವನಜಾ, ‘ಮನೆ ಖಾಲಿ ಮಾಡಿಸಿಕೊಡಬೇಕು’ ಎಂದು 2015ರಲ್ಲಿ ನಗರದ ಸಿವಿಲ್‌ ಕೋರ್ಟ್‌ (ನಂ.43) ಮೊರೆ ಹೋದರು. ‘ಪ್ರತಿ 11 ತಿಂಗಳ ನಂತರ ಬಾಡಿಗೆಯನ್ನು ಶೇ 5ರಷ್ಟು ಏರಿಕೆ ಮಾಡಬೇಕು ಎಂಬ ಷರತ್ತು ವಿಧಿಸಿದ್ದೆವು. ಆದರೆ, ಬಾಡಿಗೆದಾರರು ಏರಿಕೆ ಹಣ ಕೊಡಲು ಒಪ್ಪುತ್ತಿಲ್ಲ. ಒಪ್ಪಂದ ಉಲ್ಲಂಘಿಸಿದ್ದಾರೆ. ಅಷ್ಟೇ ಅಲ್ಲ, ಈ ಮನೆಯನ್ನು ಚಿಟ್‌ ಫಂಡ್‌ ವ್ಯವಹಾರಕ್ಕೆ ಬಳಸಿದ್ದಾರೆ’ ಎಂದು ಅರ್ಜಿಯಲ್ಲಿ ಆಪಾದಿಸಿದ್ದರು.

ಇದಕ್ಕೆ ಪ್ರತಿಯಾಗಿ ಯಶ್‌ ಕುಟುಂಬ, ‘ಮನೆ ಬಾಡಿಗೆಗೆ ಪಡೆದಾಗ ನಿರ್ಮಾಣ ಪೂರ್ಣಗೊಂಡಿರಲಿಲ್ಲ. ಪೂರ್ಣಗೊಳ್ಳಲು ₹ 12.50 ಲಕ್ಷ ಖರ್ಚು ಮಾಡಿದ್ದೇವೆ. ಈ ಹಣವನ್ನು ಬಾಡಿಗೆ ಬಾಕಿಗೆ ಹೊಂದಿಸಿಕೊಳ್ಳಬೇಕು’ ಎಂದು ವಾದ ಮಂಡಿಸಿತ್ತು.

ಈ ಕುರಿತಂತೆ 2018ರ ಏಪ್ರಿಲ್‌ 7ರಂದು ತೀರ್ಪು ನೀಡಿದ್ದ ಸಿವಿಲ್‌ ನ್ಯಾಯಾಲಯ, ‘2013ರ ನಂತರದಿಂದ ಮನೆ ಖಾಲಿ ಮಾಡುವ ತನಕ ತಿಂಗಳ ಬಾಡಿಗೆ ₹ 40 ಸಾವಿರದಂತೆ ಪಾವತಿ ಮಾಡಬೇಕು’ ಎಂದು ಯಶ್ ಕುಟುಂಬಕ್ಕೆ ತಾಕೀತು ಮಾಡಿತ್ತು.

ಇದನ್ನು ಪ್ರಶ್ನಿಸಿ ಪುಷ್ಪಾ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು 2018ರ ಸೆಪ್ಟೆಂಬರ್‌ 5ರಂದು ವಜಾ ಮಾಡಿದ್ದ ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಹಾಗೂ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್‌ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಬಾಡಿಗೆಯ ಬಾಕಿ ಹಣ ಪಾವತಿಸಿದರೆ 2019ರ ಮಾರ್ಚ್ 31ರವರೆಗೆ ವಾಸ ಮುಂದುವರಿಸಬಹುದು’ ಎಂದು ಆದೇಶಿಸಿತ್ತು. ಬಾಕಿ ಬಾಡಿಗೆ ಹಣಕ್ಕೆ ಅಧೀನ ನ್ಯಾಯಾಲಯ ವಿಧಿಸಿದ್ದ ಶೇ 9ರಷ್ಟು ಬಡ್ಡಿ ದರವನ್ನು ನ್ಯಾಯಪೀಠ, ಶೇ 6ಕ್ಕೆ ಇಳಿಕೆ ಮಾಡಿತ್ತು.

ಮಾತುಕತೆಯಿಂದ ಬಗೆಹರಿಸಿಕೊಳ್ಳುತ್ತೇವೆ’

‘ನಾವು ಈ ವಿಷಯವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ’ ಎಂದು ಯಶ್‌ ಅವರ ತಾಯಿ ಪುಷ್ಪಾ ಹೇಳಿದರು.

‘ಈ ವಿವಾದದ ಹಿಂದೆ ಚಿತ್ರರಂಗದ ಕೆಲವರ ಆಸಕ್ತಿ ಇದೆ. ಈ ವಿಷಯವನ್ನು ಇಷ್ಟು ದೊಡ್ಡದು ಮಾಡುವ ಅಗತ್ಯ ಇರಲಿಲ್ಲ. ಚಿತ್ರರಂಗದಲ್ಲಿ ಎಷ್ಟೊಂದು ಕೀಳು ಮಟ್ಟಕ್ಕೆ ಇಳಿಯುವ ಜನರಿದ್ದಾರಲ್ಲಾ ಎಂಬ ಬೇಸರ ಇದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾಲೀಕರ ಜೊತೆ ನಾವು ಚೆನ್ನಾಗಿಯೇ ಇದ್ದೇವೆ. ಮಾಲೀಕರು ಮತ್ತು ನಾವು ಕೂತು ಈ ವಿಷಯವನ್ನು ಕಾನೂನು ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.