ADVERTISEMENT

ಯತ್ನಾಳ ಹೊಸ ಪಕ್ಷ ಕಟ್ಟುವುದಿಲ್ಲ, ಬಿಜೆಪಿಯಲ್ಲೇ ಇರುತ್ತಾರೆ: ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 11:35 IST
Last Updated 1 ಏಪ್ರಿಲ್ 2025, 11:35 IST
<div class="paragraphs"><p>ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ</p></div>

ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ

   

ಬೆಳಗಾವಿ: ‘ಯತ್ನಾಳ ಅವರೂ ಸೇರಿದಂತೆ ನಮ್ಮ ತಂಡದ ಯಾರೂ ಬಿಜೆಪಿ ಬಿಟ್ಟು ಹೋಗುವುದಿಲ್ಲ. ಯತ್ನಾಳ ಹೊಸ ಪಕ್ಷವನ್ನೂ ಕಟ್ಟುವುದಿಲ್ಲ. ಮರಳಿ ಬಿಜೆಪಿಗೆ ಸೇರಿಸಿಕೊಳ್ಳುವ ವಿಶ್ವಾಸವಿದೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಯತ್ನಾಳ ಹೊಸ ಪಕ್ಷ ಕಟ್ಟುವ ನಿರ್ಧಾರ ಮಾಡಿಲ್ಲ. ಮಾಧ್ಯಮಗಳಲ್ಲಿ ಅದು ಬೇರೆ ಅರ್ಥ ಕಲ್ಪಿಸುವಂತೆ ಪ್ರಕಟವಾಗಿದೆ’ ಎಂದರು.

ADVERTISEMENT

‘‍ಪಕ್ಷಕ್ಕೆ ಮುಜುಗರ ತರುವ ರೀತಿ ಮಾತನಾಡಬೇಡಿ ಎಂದಷ್ಟೇ ನಾನು ಯತ್ನಾಳರಿಗೆ ಮನವಿ ಮಾಡಿಕೊಂಡಿದ್ದೇನೆ. ಬೆಂಗಳೂರಿನಲ್ಲಿ ನಡೆಸಿದ ಸಭೆಯಲ್ಲಿ ಮಹತ್ವದ ವಿಷಯ ಚರ್ಚೆ ಮಾಡಿದ್ದೇವೆ. ಎಲ್ಲವನ್ನೂ ಮಾಧ್ಯಮದವರ ಮುಂದೆ ಹೇಳುವುದಿಲ್ಲ’ ಎಂದರು.

‘ಯತ್ನಾಳ ಅವರ ವಿಚಾರವಾಗಿ ಕೆಲವರು ಈಗ ಏನೇನೋ ಮಾತನಾಡುತ್ತಿದ್ದಾರೆ. ಕೆಲವೇ ತಿಂಗಳ ಹಿಂದೆ ಅವರೇ ಮಾತನಾಡಿದ ಮಾತುಗಳು ಯು ಟ್ಯೂಬ್‌ನಲ್ಲಿವೆ. ‘ಯತ್ನಾಳ ನಮ್ಮ ಅಣ್ಣ, ಚಿಕ್ಕಪ್ಪನ ಸಮಾನ. ಅವರನ್ನು ಮುಖ್ಯಮಂತ್ರಿ ಮಾಡಿಯೇ ತೀರುತ್ತೇವೆ’ ಎಂದೆಲ್ಲ ಮಾತನಾಡಿದ್ದಾರೆ. ಈಗ ಉಲ್ಟಾ ಹೊಡೆದಿದ್ದಾರೆ’ ಎಂದು ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ತಿರುಗೇಟು ನೀಡಿದರು.

‘ಯತ್ನಾಳ ಅವರ ಬೆನ್ನಿಗೆ ಪಂಚಮಸಾಲಿ ಸಮಾಜ ಏಕೆ ನಿಲ್ಲುತ್ತಿಲ್ಲ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ಸಮಾಜ ಯಾವ ಪಕ್ಷಕ್ಕೂ ಸೀಮಿತವಾಗಿಲ್ಲ. ನಾನು ಆ ಸಮಾಜದ ಬಗ್ಗೆ ಏನೂ ಹೇಳುವುದಿಲ್ಲ’ ಎಂದರು.

‘ಏ.2ರಂದು ವಿಜಯೇಂದ್ರ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಕುರಿತು ವಿಚಾರ ಮಾಡಿಲ್ಲ. ದೇವರು ಏನು ಬುದ್ಧಿ ಕೊಡುತ್ತಾನೋ ಅದನ್ನು ಮಾಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಮೇಶ ಜಾರಕಿಹೊಳಿ, ಅರವಿಂದ ಲಿಂಬಾವಳಿ ಅವರನ್ನು ಉಚ್ಚಾಟನೆ ಮಾಡುವ ಚರ್ಚೆ ನಡೆದಿದೆಯೇ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೇಶ, ‘ಇದೆಲ್ಲ ಸುಳ್ಳು. ಹಾಗೆ ಹೇಳಿದವರು ಯಾರೆಂದು ತಿಳಿಸಿ ನೋಡೋಣ’ ಎಂದು ಮರುಪ್ರಶ್ನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.