ADVERTISEMENT

ಬಿಎಸ್‌ವೈ– ನಳಿನ್‌ ಇಂದಿನಿಂದ ಚುನಾವಣಾ ಪ್ರಚಾರ

100 ದಿನಗಳ ಸಾಧನೆ ಬಿಂಬಿಸುವ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 20:00 IST
Last Updated 21 ನವೆಂಬರ್ 2019, 20:00 IST
ಬಿ.ಎಸ್.ಯಡಿಯೂರಪ್ಪ ಮತ್ತು ನಳೀನ್ ಕುಮಾರ್ ಕಟೀಲ್
ಬಿ.ಎಸ್.ಯಡಿಯೂರಪ್ಪ ಮತ್ತು ನಳೀನ್ ಕುಮಾರ್ ಕಟೀಲ್   

ಬೆಂಗಳೂರು: ಪಕ್ಷದ ಎಲ್ಲ ಅಭ್ಯರ್ಥಿಗಳನ್ನು ಶತಾಯಗತಾಯ ಗೆಲ್ಲಿಸಿಕೊಂಡು ಬರಬೇಕು ಎಂಬ ಪಣ ತೊಟ್ಟಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಾಳೆಯಿಂದ (ಶನಿವಾರ) ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ.

ರಾಜ್ಯದಲ್ಲಿ ಸ್ಥಿರ ಮತ್ತು ಏಕಪಕ್ಷದ ಸರ್ಕಾರದ ಅಗತ್ಯತೆ ವಿಷಯವನ್ನು ಮುಂದಿಟ್ಟುಕೊಂಡು, 100 ದಿನಗಳ ಸಾಧನೆಯನ್ನೂ ವಿವರಿಸಿ ಮತದಾರರನ್ನು ಒಲಿಸಿಕೊಳ್ಳಲು ನಿರ್ಧಾರಿಸಿದ್ದಾರೆ ಎಂದು ಉಪಚುನಾವಣೆ ಉಸ್ತುವಾರಿ ವಹಿಸಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ 33 ವರ್ಷಗಳ ಬಳಿಕ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತಕ್ಕೆ ಅವಕಾಶ ಸಿಕ್ಕಿದೆ. ಉಪಚುನಾವಣೆಯಲ್ಲಿ ಮತದಾರರು ಎಲ್ಲ ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ಮೂಲಕ ಸ್ಥಿರ ಮತ್ತು ಏಕ ಪಕ್ಷದ ಸರ್ಕಾರಕ್ಕೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ADVERTISEMENT

ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿರುವ ಶಾಸಕರು ಸಮ್ಮಿಶ್ರ ಸರ್ಕಾರದ ಆಡಳಿತಕ್ಕೆ ಬೇಸತ್ತು ರಾಜೀನಾಮೆ ನೀಡಿ ಹೊರಬಂದರು. ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯ ಜ್ವಲಂತ ಸಮಸ್ಯೆಗಳಿಗೆ ಸರ್ಕಾರ ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಪರಿಹಾರ ಕಲ್ಪಿಸಿದೆ. ಮುಂದಿನ ಮೂರೂವರೆ ವರ್ಷಗಳ ಸ್ಥಿರ ಆಡಳಿತಕ್ಕಾಗಿ ಮತದಾರರ ಬೆಂಬಲ ಕೋರುವುದಾಗಿ ಅವರು ತಿಳಿಸಿದರು.

ಅಥಣಿಯಿಂದ ಬಿಎಸ್‌ವೈ

ಮುಖ್ಯಮಂತ್ರಿ ಯಡಿಯೂರಪ್ಪ ಅಥಣಿಯಿಂದ ಪ್ರಚಾರ ಪ್ರವಾಸ ಆರಂಭಿಸಿದರೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಕೆ.ಆರ್‌.ಪೇಟೆಯಿಂದ ಪ್ರಚಾರ ಆರಂಭಿಸಲಿದ್ದಾರೆ. ಅಲ್ಲದೆ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಡಿ.ವಿ.ಸದಾನಂದಗೌಡ, ಸುರೇಶ್‌ ಅಂಗಡಿ, ರಾಜ್ಯದ ಸಚಿವರಾದ ಜಗದೀಶ ಶೆಟ್ಟರ್‌, ಆರ್‌.ಅಶೋಕ್‌, ಕೆ.ಎಸ್‌.ಈಶ್ವರಪ್ಪ, ಗೋವಿಂದ ಕಾರಜೋಳ, ಶ್ರೀರಾಮುಲು ಅವರು ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ ಎಂದು ಲಿಂಬಾವಳಿ ತಿಳಿಸಿದರು.

ಮಾಧುಸ್ವಾಮಿ ಬದಲು ಮಾಡಿದ್ದೇಕೆ?

ಕೆ.ಆರ್‌.ಪೇಟೆ ಚುನಾವಣೆ ಉಸ್ತುವಾರಿಯಿಂದ ಕೈಬಿಡಲು ಸಚಿವ ಜೆ.ಸಿ.ಮಾಧುಸ್ವಾಮಿ ಅವರೇ ಮನವಿ ಮಾಡಿದ್ದರು. ಆ ಕಾರಣಕ್ಕಾಗಿ ಅಲ್ಲಿಗೆ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರನ್ನು ನೇಮಿಸಲಾಗಿದೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.

ತಮಗೆ ಕಾರ್ಯದ ಒತ್ತಡ ಇರುವುದರಿಂದ ಉಸ್ತುವಾರಿ ವಹಿಸಲು ಆಗುವುದಿಲ್ಲ ಎಂದು ಮನವಿ ಮಾಡಿದ್ದರು. ಕೆ.ಆರ್‌.ಪೇಟೆಯಲ್ಲಿ ನಾಮಪತ್ರದ ದಿನ ಚಪ್ಪಲಿ ತೂರಾಟ, ಘರ್ಷಣೆ ಬಳಿಕ ಅನಗತ್ಯ ಗೊಂದಲ ಬೇಡ ಎಂಬ ಕಾರಣಕ್ಕೆ ಉಸ್ತುವಾರಿ ಬದಲಾಯಿಸಲಾಯಿತು. ಮುಂದೆಯೂ ಇಂತಹ ಘಟನೆ ನಡೆಯುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಬೇಕಾಗುತ್ತದೆ. ಆದ್ದರಿಂದ ಅಶ್ವತ್ಥನಾರಾಯಣ ಅವರನ್ನು ನೇಮಿಸಲಾಯಿತು ಎಂದರು.

ಕಲಬುರ್ಗಿ ವಿಮಾನ ನಿಲ್ದಾಣ ಉದ್ಘಾಟನೆ

ಕಲಬುರ್ಗಿ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಶನಿವಾರ ಉದ್ಘಾಟಿಸಲಿದ್ದಾರೆ. 2008 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ, ವಿಮಾನ ನಿಲ್ದಾಣಕ್ಕೆ ಭೂಮಿ ಪೂಜೆ ಮಾಡಿದರು. ಉಡಾನ್‌ ಯೋಜನೆಯಡಿ ವಿಮಾನ ನಿಲ್ದಾಣ ಸ್ಥಾಪನೆ ಆಗುತ್ತಿದ್ದು, ನಾಳೆ ಮೊದಲ ವಿಮಾನ ಕಲಬುರ್ಗಿಯಲ್ಲಿ ಲ್ಯಾಂಡಿಂಗ್‌ ಆಗುತ್ತದೆ ಎಂದು ಅರವಿಂದ್‌ ತಿಳಿಸಿದರು.

ನೂರು ದಿನಗಳ ಸಾಧನೆ, ಪ್ರಚಾರದ ಅಸ್ತ್ರ

* ಹೈದ್ರಾಬಾದ್‌ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಣೆ.

* ನೆರೆ ಸಂತ್ರಸ್ತರಿಗೆ ಸಮರೋಪಾದಿಯಲ್ಲಿ ಪರಿಹಾರ, ಮನೆ ಕಳೆದುಕೊಂಡವರಿಗೆ ಅತಿ ಹೆಚ್ಚಿನ ಪರಿಹಾರವಾದ ₹ 5 ಲಕ್ಷ ಕೊಡುವ ತೀರ್ಮಾನ

*ಮಹದಾಯಿ, ಕಳಸ ಬಂಡೂರಿ ಯೋಜನೆಗೆ ಹಸಿರು ಪೀಠದ ಅನುಮತಿ.

* ದಲಿತ, ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಲು ಕಲ್ಯಾಣ ಭಾಗ್ಯ ಯೋಜನೆ ಜಾರಿ.

*ನೇಕಾರರ ₹100 ಕೋಟಿ ಸಾಲ ಮನ್ನಾ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಯಾದಗಿರಿ ಮತ್ತು ಹಾವೇರಿ ಜಿಲ್ಲೆಗಳಿಗೆ ನೂತನ ಮೆಡಿಕಲ್‌ ಕಾಲೇಜುಗಳ ಅನುಮೋದನೆ.

* ರೈತರಿಗೆ ಪಿಎಂ ಕಿಸಾನ್‌ ಯೋಜನೆಯಡಿ ವಾರ್ಷಿಕ ₹4,000, 25 ಸಾವಿರ ಮೀನುಗಾರರಿಗೆ ಸಾಲ ಮನ್ನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.