ADVERTISEMENT

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 6:50 IST
Last Updated 24 ಜುಲೈ 2021, 6:50 IST
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ   

ಬೆಳಗಾವಿ: ‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಕೇವಲ ಮಾಧ್ಯಮದ ಸೃಷ್ಟಿ’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶನಿವಾರ ಮಾತನಾಡಿದ ಅವರು, ‘ಬದಲಾವಣೆ ಬಗ್ಗೆ ನಮ್ಮ ಹೈಕಮಾಂಡ್‌ನವರು ಎಲ್ಲಿಯೂ ಅಧಿಕೃತವಾಗಿ ಹೇಳಿಲ್ಲ. ಹೀಗಾಗಿ, ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ’ ಎಂದರು.

‘ವಿರೋಧಪಕ್ಷವಾದ ಕಾಂಗ್ರೆಸ್‌ನವರು ಕೆಲಸವಿಲ್ಲದೆ ಖಾಲಿ ಕುಳಿತಿದ್ದಾರೆ. ಹೀಗಾಗಿ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಏನಾದರೂ ಹೇಳಬೇಕೆಂದು ಹೇಳುತ್ತಿರುತ್ತಾರೆ’ ಎಂದು ತಿರುಗೇಟು ನೀಡಿದರು.

ADVERTISEMENT

‘ಮಳೆಯಿಂದಾಗಿ ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯಾಗಿದೆ. ಜನರು ಯಾವುದೇ ಕಾರಣಕ್ಕೂ ಭಯಭೀತರಾಗಬಾರದು. ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ರೀತಿಯ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಅಂತಹ‌ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಬಂದಿಲ್ಲ. ಒಂದು ವೇಳೆ ಪ್ರವಾಹ ಎದುರಾದರೆ ಎದುರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ‌. ಜನರು ಹುಂಬತನ ಮಾಡಿ ಊರಲ್ಲೇ ಇರಬಾರದು. ಅಧಿಕಾರಿಗಳು ಸೂಚಿಸಿದಂತೆ ಕೇಳಬೇಕು. ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಸೂಚನೆಗಳನ್ನು ಪಾಲಿಸಬೇಕು. ಸ್ಥಳಾಂತರಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಕೋರಿದರು.

ಪ್ರವಾಹ ತಗ್ಗಿಸಲು ಆಲಮಟ್ಟಿ ಜಲಾಶಯದಿಂದ 3.50 ಲಕ್ಷ ಕ್ಯುಸೆಕ್‌ ನೀರು ಹೊರ ಬಿಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಘಟಪ್ರಭಾ ಜಲಾಶಕ್ಕೆ 95ಸಾವಿರ ಕ್ಯುಸೆಕ್‌ ಬರುತ್ತಿದ್ದರೂ ಹೊರಹರಿವು ಸದ್ಯಕ್ಕೆ 25ಸಾವಿರ ಕ್ಯುಸೆಕ್‌ ದಾಟದಂತೆ ನೋಡಿಕೊಳ್ಳುವಂತೆ ನಿರ್ದೇಶನ ನೀಡಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.