ADVERTISEMENT

ಕೊರೊನಾ ವೈರಸ್: ಮುಸ್ಲಿಂ ಸಮುದಾಯದ ಸಂಪೂರ್ಣ ಸಹಕಾರದ ಭರವಸೆ–ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 8:38 IST
Last Updated 3 ಏಪ್ರಿಲ್ 2020, 8:38 IST
   

ಬೆಂಗಳೂರು: ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದವರ ಸಹಕಾರ ಕುರಿತಂತೆ ಮನವಿ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಶುಕ್ರವಾರ ಮುಸ್ಲಿಂ ಮುಖಂಡರು ಹಾಗೂ ಶಾಸಕರುಗಳಾದ ಸಿ.ಎಂ. ಇಬ್ರಾಹಿಂ, ಎನ್.ಎ. ಹ್ಯಾರಿಸ್, ಜಮೀರ್ ಅಹಮದ್, ನಸೀರ್ ಅಹಮದ್, ಶ್ರೀ ರಿಜ್ವಾನ್ ಅರ್ಷದ್, ಅಖಂಡ, ಶ್ರೀನಿವಾಸಮೂರ್ತಿ, ಸಲೀಮ್ ಅಹಮದ್ ಅವರುಗಳೊಂದಿಗೆ ಯಡಿಯುರಪ್ಪ ಸಭೆ ನಡೆಸಿದರು.

ಸಭೆಯ ಬಳಿಕ ಮಾಧ್ಯಮಗಳಿಗೆ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಮನವಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಹಾಗೂ ನಿಜಾಮುದ್ದೀನ್ ತಬ್ಲೀಘ್ ಮರ್ಕಜ್‌ಗೆ ಭೇಟಿ ನೀಡಿದ ರಾಜ್ಯದ ವ್ಯಕ್ತಿಗಳ ಮಾಹಿತಿ ನೀಡಿ, ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಹಾಗೂ ಕ್ವಾರಂಟೈನ್‍ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವೊಲಿಸಲು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ADVERTISEMENT

ಕರೋನಾ ವೈರಸ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯೊಂದೇ ಪರಿಹಾರ. ಲಾಕ್‍ಡೌನ್ ಅವಧಿ ಮುಗಿಯುವ ವರೆಗೆ ಎಲ್ಲರ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಾತಿ, ಧರ್ಮ ಭೇದ ಮರೆತು ಶ್ರಮಿಸಬೇಕಾಗಿದೆ ಎಂದು ಎಲ್ಲ ಮುಖಂಡರೂ ಸರ್ವಾನುಮತದ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಮಾಹಿತಿ ನೀಡಿದರು.

ಆರೋಗ್ಯ ಕಾರ್ಯಕರ್ತರಿಗೆ ಎಲ್ಲ ರೀತಿಯ ಸಹಕಾರ ನೀಡುವಂತೆ ತಮ್ಮ ಸಮುದಾಯದ ಜನರ ಮನವೊಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ರಾಜ್ಯದ ಎಲ್ಲ ಜನರಲ್ಲಿ ನನ್ನ ವಿನಂತಿ ಏನೆಂದರೆ, ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ನಾವೆಲ್ಲರೂ ಒಟ್ಟಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕರೋನಾ ವಿರುದ್ಧದ ಸಮರ ಜಯಿಸೋಣ ಎಂದು ಮನವಿ ಯಡಿಯೂರಪ್ಪ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.