ADVERTISEMENT

ಹಜ್‌ ಭವನಕ್ಕೆ ಅಬ್ದುಲ್‌ ಕಲಾಂ ಹೆಸರಿಡಲು ತಕರಾರಿಲ್ಲ: ಯಡಿಯೂರಪ್ಪ

ಡಿ.ಕೆ.ಶಿವಕುಮಾರ್ ದಾಖಲೆ ಇದ್ದರೆ ಬಿಡುಗಡೆ ಮಾಡಲಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2018, 8:11 IST
Last Updated 24 ಜೂನ್ 2018, 8:11 IST
   

ಬೆಂಗಳೂರು: ನಿಮ್ಮ ಬಳಿ ಏನಾದರೂ ಡೈರಿ ಇದ್ದರೆ ಬಿಡುಗಡೆ ಮಾಡಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ಬಿಜೆಪಿ ನಾಯಕರ ಡೈರಿ ನನ್ನ ಬಳಿ ಇದೆ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆಗೆ ಭಾನುವಾರ ಮಾಧ್ಯಮ ಗೋಷ್ಠಿಯಲ್ಲಿ ಯಡಿಯೂರಪ್ಪ ಪ್ರತಿಕ್ರಿಯಿಸಿದರು.

ನಿಮ್ಮದೇ ಸರ್ಕಾರ ಇದೆ. ಎಸಿಬಿ, ಸಿಒಡಿ, ಲೋಕಾಯುಕ್ತ ನಿಮ್ಮ ಕೈಯಲ್ಲೇ ಇದೆ. ಕುಂಟುನೆಪ ಹೇಳದೆ ತನಿಖೆ ಮಾಡಿಸಿ ಎಂದೂ ಹೇಳಿದರು.

ADVERTISEMENT

ಹಜ್ ಭವನಕ್ಕೆ ನಿವೇಶನ ನೀಡಿ, ಹಣ ಕೊಟ್ಟಿದ್ದು ನಮ್ಮ ಸರ್ಕಾರ ಇದ್ದಾಗ. ಅದಕ್ಕೆ ಟಿಪ್ಪು ಹೆಸರಿಟ್ಟು ವಿವಾದ ಎಬ್ಬಿಸಲು ಮುಂದಾಗಿರುವುದು ಸರಿಯಲ್ಲ. ಹಜ್ ಭವನ ಎಂದೇ ಇರಲಿ. ಇಲ್ಲವಾದರೆ, ಅಬ್ದುಲ್ ಕಲಾಂ ಹೆಸರಿಡಲು ನಮ್ಮ ತಕರಾರಿಲ್ಲ. ಅನಗತ್ಯವಾಗಿ ರಾಜ್ಯದ ವಾತಾವರಣ ಕಲುಷಿತ ಮಾಡುವುದು ಬೇಡ ಎಂದೂ ಅವರು ಹೇಳಿದರು.

ಕುಮಾರಸ್ವಾಮಿ ಚುನಾವಣೆ ಸಂದರ್ಭದಲ್ಲಿ ಅನೇಕ ಭರವಸೆಗಳನ್ನು ನೀಡಿದ್ದರು. 37 ಸ್ಥಾನಗಳನ್ನೂ ಗೆದ್ದಿದ್ದಾರೆ. 24 ಗಂಟೆಗಳಲ್ಲಿ ಭರವಸೆ ಈಡೇರಿಸುವ ವಾಗ್ದಾನಕ್ಕಾಗಿ ಜನತೆ ಕಾಯುತ್ತಿದ್ದಾರೆ. ಆದ್ದರಿಂದ ನಾವು 15 ದಿನಗಳಿಂದ ಏನೂ ಮಾತನಾಡದೇ ಸುಮ್ಮನೆ ಇದ್ದೇವೆ. ನಾವೂ ಕಾದು ನೋಡುತ್ತಿದ್ದೇವೆ ಎಂದರು.

29ರಂದು ಕಾರ್ಯಕಾರಿಣಿ:

ಇದೇ 29 ರಂದು ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಎಲ್ಲ ಶಾಸಕರು ಮತ್ತು ಸಂಸದರು ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸರ್ಕಾರದ 4 ವರ್ಷಗಳ ಸಾಧನೆಯನ್ನು ಮನೆ, ಮನೆಗೆ ತಲುಪಿಸುವ ಮತ್ತು ಇತರ ವಿಷಯಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಕಾವೇರಿ ವಿಚಾರ:

ಕಾವೇರಿ ನಿರ್ವಹಣಾ ಮಂಡಳಿ ಬಗ್ಗೆ ಸರಿಯಾದ ಎಚ್ಚರಿಕೆ ವಹಿಸಲು ಹಿಂದಿನ ಸರ್ಕಾರವೂ ಸೋತಿತ್ತು, ಈಗಲೂ ಹಾಗೆ ಆಗಿದೆ. ಕಾವೇರಿ ವಿಚಾರದಲ್ಲಿ ಸರ್ಕಾರದ ಜತೆ ನಾವು ಇದ್ದೇವೆ. ರಾಜಕಾರಣ ಮಾಡದೇ ಸಮಸ್ಯೆ ಬಗೆಹರಿಸಿ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.