
ಶಾಸಕ ಕೆ.ಎಂ. ಶಿವಲಿಂಗೇಗೌಡ
ಬೆಂಗಳೂರು: ‘ಎತ್ತಿನಹೊಳೆ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಆದರೆ, ಯೋಜನೆಗೆ ಅವಕಾಶ ಸಿಗುತ್ತಿಲ್ಲ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ನ ಕೆ.ಎಂ. ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಿವಲಿಂಗೇಗೌಡ ಅವರ ಮಾತಿಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಗದ್ದಲದ ನಡುವೆಯೂ ಮಾತು ಮುಂದುವರಿಸಿದ ಶಿವಲಿಂಗೇಗೌಡ, ‘ನೀವು ನೀರಾವರಿ ಯೋಜನೆಯನ್ನು ಹಾಳು ಮಾಡಿದವರು. ಯಾವ ಯೋಜನೆಗೆ ಕೇಂದ್ರದವರು ಅನುಮತಿ ಕೊಟ್ಟಿದ್ದಾರೆ? ಮಹದಾಯಿ ಯೋಜನೆಗೆ ಅವಕಾಶ ಕೊಟ್ರಾ’ ಎಂದು ಕೆಣಕಿದರು.
‘ನಾವು ಭಾರತ ದೇಶದ ಪ್ರಜೆಗಳು ಕಣ್ರೀ. ಕೇಳೋ ಹಕ್ಕು ನಮಗಿದೆ. ಎಲ್ಲದಕ್ಕೂ ಕೇಂದ್ರ ಸರ್ಕಾರ ಅಡ್ಡಿ ಮಾಡುತ್ತಿದೆ’ ಎಂದೂ ಕಿಡಿಕಾರಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯಿಸಿ, ‘ಎತ್ತಿನ ಹೊಳೆ ಯೋಜನೆಗೆ ಅರಣ್ಯ ಇಲಾಖೆಯ ಭೂಮಿ ಬೇಕಿದ್ದು, ಅದಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಬೇಕಿದೆ. ಅವರು ಕೇಳಿದ ಎಲ್ಲ ಸ್ಪಷ್ಟೀಕರಣ ಕೊಟ್ಟಿದ್ದೇವೆ. ಎಲ್ಲ ಷರತ್ತುಗಳನ್ನೂ ಪೂರೈಸಿದ್ದೇವೆ. ಕೇಂದ್ರ ನಮಗೆ ಅವಕಾಶ ಮಾಡಿಕೊಡಬೇಕು’ ಎಂದರು.
ಇಂಧನ ಇಲಾಖೆಗೆ ನಷ್ಟ: ಟೆಂಡರ್ ಪ್ರಕ್ರಿಯೆ, ಕಾಮಗಾರಿ ಲೋಪಗಳಿಂದ ಇಂಧನ ಇಲಾಖೆಗೆ ನಷ್ಟ ಉಂಟಾಗಿರುವ ಕುರಿತು ಬಿಜೆಪಿಯ ರವಿ ಸುಬ್ರಹ್ಮಣ್ಯ ವಿಷಯ ಪ್ರಸ್ತಾಪಿಸಿದರು.
‘ಇಂಧನ ಇಲಾಖೆಯು ನಾಲ್ಕೈದು ಗುತ್ತಿಗೆದಾರರ ಹಿಡಿತದಲ್ಲಿದೆ. ಬೇರೆ ಬೇರೆ ಎಸ್ಕಾಂಗಳಲ್ಲಿ ಅವ್ಯವಹಾರ ಆಗಿದೆ. ಇದೇ ರೀತಿ ಮುಂದುವರಿದರೆ ಮುಂದೆ ಕಷ್ಟ. ಉದ್ಯೋಗಿಗಳಿಗೆ ಸಂಬಳ ಕೊಡಲು ಕೂಡಾ ಆಗಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.