ADVERTISEMENT

ಪೊಲೀಸರೊಂದಿಗೆ ವಾಗ್ವಾದ, ಯುವತಿ ಮೇಲೆ ಹಲ್ಲೆ: ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 15:18 IST
Last Updated 9 ಮಾರ್ಚ್ 2021, 15:18 IST
ಯುವತಿ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ನಡುವೆ ಮಾತಿನ ಚಕಮಕಿ ನಡೆಯುತ್ತಿರುವುದು
ಯುವತಿ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ನಡುವೆ ಮಾತಿನ ಚಕಮಕಿ ನಡೆಯುತ್ತಿರುವುದು   

ಮಂಡ್ಯ: ಹೆಲ್ಮೆಟ್‌ ತಪಾಸಣೆ ಸಂದರ್ಭದಲ್ಲಿ ವಾಗ್ವಾದ ನಡೆಸಿದ ಯುವತಿಯೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿದ ದೃಶ್ಯ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಗರದ ಬೆಸಗರಹಳ್ಳಿ ರಾಮಣ್ಣ ಸರ್ಕಲ್‌ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಹೆಲ್ಮೆಟ್‌ ಧರಿಸದ ಬಿ.ಇಡಿ ವಿದ್ಯಾರ್ಥಿನಿ, ಮಾಡೆಲ್‌ ಸುಷ್ಮಿತಾ ಅವರ ದ್ವಿಚಕ್ರ ವಾಹನವನ್ನು ಪೊಲೀಸರು ತಡೆದರು. ದಾಖಲಾತಿ ಪರಿಶೀಲನೆ ನಂತರ ಹೆಲ್ಮೆಟ್‌ ಧರಿಸದ ಯುವತಿಗೆ ಪೊಲೀಸರು ದಂಡ ವಿಧಿಸಿದರು. ಆದರೆ ಯುವತಿ, ತನ್ನ ಬಳಿ ಹಣ ಇಲ್ಲ, ಫೋನ್‌ ಪೇ ಮಾಡುತ್ತೇನೆ, ಇಲ್ಲವೇ ಬರೆಯವರ ಬಳಿ ಪಡೆದು ಹಣ ಪಾವತಿಸುತ್ತೇನೆ ಎಂದು ತಿಳಿಸಿದರು.

ಇದಕ್ಕೆ ಒಪ್ಪದ ಪೊಲೀಸರು ಸ್ಕೂಟರ್‌ ವಶಕ್ಕೆ ಪಡೆಯಲು ಮುಂದಾದರು. ಇದರಿಂದ ಕೋಪಗೊಂಡ ಯುವತಿ, ತನ್ನ ಗಾಡಿ ಮುಟ್ಟುವ ಹಕ್ಕು ಕೊಟ್ಟವರಾರು ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ತಾಳ್ಮೆ ಕಳೆದುಕೊಂಡ ಮಹಿಳಾ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಸವಿತಾ ಯುವತಿಗೆ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು.

ADVERTISEMENT

ಇದರಿಂದ ಕುಪಿತರಾದ ಯುವತಿ ಕೂಡ ಪೊಲೀಸರನ್ನು ಏಕವಚನದಲ್ಲಿ ನಿಂದಿಸಿದರು. ಘಟನೆ ನಡೆಯುವ ಸಂದರ್ಭದಲ್ಲಿ ಸುತ್ತಲೂ ಇದ್ದ ಜನರು ಮೂಕ ಪ್ರೇಕ್ಷಕರಾಗಿದ್ದರು. ಘಟನೆಯ ವಿಡಿಯೊವನ್ನು ಪೊಲೀಸ್‌ ಸಿಬ್ಬಂದಿಯೇ ಮಾಡುತ್ತಿದ್ದರು.

‘ಫೋನ್‌ ಪೇ, ಗೂಗಲ್‌ ಪೇ ಮೂಲಕ ದಂಡಪಾವತಿಸುವ ವ್ಯವಸ್ಥೆ ಇನ್ನೂ ಬಂದಿಲ್ಲ. ಇಲಾಖೆ ಖಾತೆಗೆ ಹಣ ಜಮೆ ಮಾಡಬೇಕಾದ ಅವಶ್ಯಕತೆ ಇದೆ. ಹೀಗಾಗಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಈ ಪ್ರಕರಣದಲ್ಲಿ ಎರಡೂ ಕಡೆ ತಪ್ಪಾಗಿದೆ. ಯುವತಿಯ ಪೋಷಕರು ಕ್ಷಮಾಪಣೆ ಪತ್ರ ಬರೆದು ಕೊಟ್ಟಿದ್ದಾರೆ. ಆದರೂ ನಾನು ತನಿಖೆಗೆ ಆದೇಶ ನೀಡಿದ್ದೇನೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅಶ್ವಿನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.