ADVERTISEMENT

‘ಪಬ್‌ಜಿ’ಯಲ್ಲಿ ಪ್ರೀತಿ: ವಿಡಿಯೊ ಮಾಡಿ ಯುವತಿಗೆ ಬ್ಲಾಕ್‌ಮೇಲ್

ಗುಜರಾತ್‌ ಯುವಕನ ಬಂಧನ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 15:09 IST
Last Updated 25 ಜುಲೈ 2019, 15:09 IST
   

ಬೆಳಗಾವಿ: ಮೊಬೈಲ್‌ನಲ್ಲಿ ‘ಪಬ್‌ಜಿ’ ಆನ್‌ಲೈನ್ ಗೇಮ್‌ ಆಡುವಾಗ ಸಂಪರ್ಕಕ್ಕೆ ಬಂದ ಯುವತಿಗೆ ಬ್ಲಾಕ್‌ಮೇಲ್‌ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಯುವಕನನ್ನು ಇಲ್ಲಿನ ಸಿಇಎನ್‌ (ಸೈಬರ್‌ಕ್ರೈಂ–ಎಕನಾಮಿಕ್ಸ್–ನಾರ್ಕೊಟಿಕ್) ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗುಜರಾತ್‌ನ ಬರೂಚ್‌ ಜಿಲ್ಲೆಯ ಮುಕ್ತಾಂಪುರ ಗ್ರಾಮದ ಜಿಲ್ಲಾ ಪಂಚಾಯತ್‌ ಕಾಲೊನಿಯ ಮಿಥಿಲ್ ಎಸ್. ಕನ್ಸಾರ (24) ಬಂಧಿತ.

‘ಇಲ್ಲಿನ 23 ವರ್ಷದ ಯುವತಿ ಹಾಗೂ ಆರೋಪಿ ಮೊಬೈಲ್‌ ನಂಬರ್‌ ಹಂಚಿಕೊಂಡಿದ್ದರು. ‌ಪರಸ್ಪರ ವಾಟ್ಸ್‌ಆ್ಯಪ್‌ ಮೂಲಕ ಸಂದೇಶ ರವಾನಿಸುತ್ತಿದ್ದರು. ಬಳಿಕ ಫೋನ್‌ನಲ್ಲಿ ಮಾತನಾಡಲು ಆರಂಭಿಸಿದ್ದಾರೆ. ಈ ವೇಳೆ, ಮಿಥುಲ್ ತಾನು ಮುಂಬೈ ನಿವಾಸಿಯಾಗಿದ್ದು, ತಿಂಗಳಿಗೆ ₹ 3 ಲಕ್ಷ ಪಡೆಯುವ ದೊಡ್ಡ ಉದ್ಯೋಗದಲ್ಲಿದ್ದೇನೆ ಎಂದು ನಂಬಿಸಿದ್ದಾನೆ. ಬಳಿಕ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿದೆ. ಆತನ ಸೂಚನೆಯಂತೆ ಮೇ 18 ಹಾಗೂ 19ರಂದು ಯುವತಿಯು ಮುಂಬೈಗೆ ಹೋಗಿ ಭೇಟಿಯಾಗಿದ್ದಳು. ಲಾಡ್ಜ್‌ನಲ್ಲಿ ಜೊತೆಗಿದ್ದ ವೇಳೆಯಲ್ಲಿ, ‘ಖಾಸಗಿ ಕ್ಷಣಗಳ’ ಫೋಟೊಗಳು ಹಾಗೂ ವಿಡಿಯೊ ಯುವತಿಗೆ ಗೊತ್ತಾಗದಂತೆ ಮಾಡಿಕೊಂಡಿದ್ದ’ ಎಂದು ತಿಳಿದುಬಂದಿದೆ.

ADVERTISEMENT

ಆಕೆ ಬೆಳಗಾವಿಗೆ ಮರಳಿದ ಕೆಲವು ದಿನಗಳ ನಂತರ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಯುವತಿ ನಿರಾಕರಿಸಿದ್ದರಿಂದ ‘ಖಾಸಗಿ ಕ್ಷಣಗಳ ಫೋಟೊ’ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ. ಅಶ್ಲೀಲ ಚಿತ್ರಗಳಿಗೆ ಯುವತಿಯ ಮುಖದ ಚಿತ್ರ ಅಂಟಿಸಿ ಅದನ್ನೂ ಹರಿಬಿಟ್ಟಿದ್ದಾನೆ. ವಿಷಯ ತಿಳಿದ ಕೂಡಲೇ ನೊಂದ ಯುವತಿಯು ಸಿಇಎನ್‌ ಠಾಣೆಗೆ ದೂರು ನೀಡಿದ್ದರು.

ಮಿಥುಲ್‌

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಬೈಲ್‌ ಫೋನ್ ನಂಬರ್‌ ಆಧರಿಸಿ ಲೊಕೇಶನ್‌ ಪತ್ತೆ ಮಾಡಿದ್ದಾರೆ. ಆಗ, ಆತ ಮುಂಬೈನವನಲ್ಲ, ಗುಜರಾತ್‌ನವನು ಎಂದು ಗೊತ್ತಾಗಿದೆ. ಇನ್‌ಸ್ಪೆಕ್ಟರ್‌ ಯು.ಎಚ್. ಸಾತೇನಹಳ್ಳಿ ಹಾಗೂ ಸಿಬ್ಬಂದಿ ಗುಜರಾತ್‌ಗೆ ಹೋಗಿ ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ. ‘ಇದೇ ರೀತಿ ಗುಜರಾತ್‌ನ ಮತ್ತೊಬ್ಬ ಯುವತಿಗೂ ವಂಚಿಸಿದ್ದಾಗಿ ಆರೋಪಿಯು ವಿಚಾರಣೆ ವೇಳೆ ತಿಳಿಸಿದ್ದಾನೆ. ಡಿಪ್ಲೊಮಾ ಅನುತ್ತೀರ್ಣನಾದ ಈತ ನಿರುದ್ಯೋಗಿಯಾಗಿದ್ದಾನೆ. ಯುವತಿಯನ್ನು ನಂಬಿಸುವ ಉದ್ದೇಶದಿಂದಾಗಿಯೇ ಸುಳ್ಳು ಹೇಳಿದ್ದಾಗಿ ತಿಳಿಸಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.