ADVERTISEMENT

ಯುವರಾಜ್‌ಗೆ ಬಿಜೆಪಿ ಮುಖಂಡನ ಕೃಪಾಕಟಾಕ್ಷ ?

ಉನ್ನತ ಹುದ್ದೆಯಲ್ಲಿದ್ದ ಮಹಿಳೆ ಸೇರಿ ಹಲವರಿಗೆ ವಂಚನೆ | ನಟಿ ರಾಧಿಕಾ ಮತ್ತಷ್ಟು ಮಂದಿಗೆ ನೋಟಿಸ್ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 21:21 IST
Last Updated 8 ಜನವರಿ 2021, 21:21 IST
ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮೀಜಿ
ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮೀಜಿ   

ಬೆಂಗಳೂರು: ಸರ್ಕಾರಿ ಕೆಲಸ ಹಾಗೂ ಕಾಮಗಾರಿಗಳ ಗುತ್ತಿಗೆ ಕೊಡಿಸುವುದಾಗಿ ಹೇಳಿ ನೂರಾರು ಕೋಟಿ ರೂಪಾಯಿ ಪಡೆದು ವಂಚಿಸಿರುವ ಆರೋಪದಡಿ ಸಿಸಿಬಿ ಪೊಲೀಸರು ಬಂಧಿಸಿರುವ ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮೀಜಿ ಎಂಬುವರಿಗೆ ಬಿಜೆಪಿ ಮುಖಂಡರೊಬ್ಬರ ಕೃಪಾಕಟಾಕ್ಷ ಇರುವ ಸಂಗತಿ ತನಿಖೆಯಿಂದ ಬಯಲಾಗಿದೆ.

‘ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂಘಟನೆಯಲ್ಲಿ ಪ್ರಭಾವಿ ಆಗಿರುವ ಮುಖಂಡರೊಬ್ಬರ ಜೊತೆ ಹಲವು ವರ್ಷಗಳಿಂದ ಯುವರಾಜ್ ಹೆಚ್ಚು ಒಡನಾಟ ಹೊಂದಿದ್ದರು. ಅವರ ಹೆಸರು ಹೇಳಿಕೊಂಡು ಯುವರಾಜ್, ಉನ್ನತ ಹುದ್ದೆಯಲ್ಲಿದ್ದ ಮಹಿಳೆ ಸೇರಿದಂತೆ ಹಲವರ ಬಳಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿರುವುದು ಗೊತ್ತಾಗಿದೆ. ಜೊತೆಗೆ, ಮುಖಂಡನೂ ಯುವರಾಜ್ ಅವರನ್ನು ಹಲವು ಪ್ರಕರಣದಲ್ಲಿ ಬಚಾವ್ ಮಾಡಲು ಯತ್ನಿಸಿರುವ ಮಾಹಿತಿ ಇದೆ. ಈ ಬಗ್ಗೆ ತನಿಖೆ ಮುಂದುವರಿದಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಬಿಜೆಪಿ ಮುಖಂಡರನ್ನು ನೇರವಾಗಿ ಭೇಟಿಯಾಗಿದ್ದ ಆರೋಪಿ, ಅವರ ಜೊತೆ ಫೋಟೊಗಳನ್ನು ತೆಗೆಸಿಕೊಂಡಿದ್ದಾರೆ. ಅದೇ ಫೋಟೊ ತೋರಿಸಿ ಜನರನ್ನು ನಂಬಿಸುತ್ತಿದ್ದರು. ತಮ್ಮ ಕೆಲಸ ಮಾಡಿಕೊಡಬಹುದೆಂದು ತಿಳಿದ ಹಲವರು, ಆರೋಪಿ ಕೇಳಿದಷ್ಟು ದುಡ್ಡು ಕೊಟ್ಟಿದ್ದರು’ ಎಂದೂ ತಿಳಿಸಿವೆ.

ADVERTISEMENT

ಜ್ಯೋತಿಷ್ಯ ಹೆಸರಿನಲ್ಲಿ ಪರಿಚಯ

‘ಜ್ಯೋತಿಷ್ಯ ಹೇಳುವುದಾಗಿ ಆರೋಪಿ ಯುವರಾಜ್, ಪ್ರಭಾವಿ ಬಿಜೆಪಿ ಮುಖಂಡನನ್ನು ಭೇಟಿಯಾಗಿದ್ದರು. ಹೆಚ್ಚು ಆತ್ಮೀಯತೆಯೂ ಬೆಳೆದಿತ್ತು. ಅದಾದ ನಂತರ ಆರೋಪಿ, ತಮ್ಮ ಬಳಿ ಬರುವ ಜನರಿಗೆ ಸರ್ಕಾರಿ ಕೆಲಸ ಹಾಗೂ ಕಾಮಗಾರಿಗಳ ಗುತ್ತಿಗೆ ಕೊಡಿಸುವುದಾಗಿ ಹೇಳಿ ಹಣ ಪಡೆಯುತ್ತಿದ್ದರು’ ಎಂದು ಮೂಲಗಳು ಹೇಳಿವೆ.

‘ಕೆಎಸ್ಆರ್‌ಟಿಸಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಹೇಳಿದ್ದ ಯುವರಾಜ್, ಉದ್ಯಮಿಯೊಬ್ಬರಿಂದ ₹ 1 ಕೋಟಿ ಪಡೆದಿದ್ದರು. ಯಾವುದೇ ಹುದ್ದೆಯನ್ನೂ ಕೊಡಿಸಿರಲಿಲ್ಲ. ಹಣವನ್ನೂ ವಾಪಸು ನೀಡಿರಲಿಲ್ಲ. ಇದರಿಂದ ಬೇಸತ್ತ ಉದ್ಯಮಿಯು ಠಾಣೆಗೆ ದೂರು ನೀಡಿದ್ದರು. ಅದರನ್ವಯ ಯುವರಾಜ್‌ ಅವರನ್ನು ಬಂಧಿಸಲಾಗಿತ್ತು. ಇದೀಗ ಅವರ ಹಲವು ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ’ ಎಂದೂ ಮೂಲಗಳು ತಿಳಿಸಿವೆ.

ಕಾರು ಚಾಲಕನ ಹೆಸರಿನಲ್ಲಿ ಖಾತೆ

‘ವಂಚನೆಯಿಂದ ಗಳಿಸಿದ ಹಣವನ್ನು ಸಂಗ್ರಹಿಸಲು ಆರೋಪಿ, ತಮ್ಮ ಕಾರು ಚಾಲಕನ ಹೆಸರಿನಲ್ಲೇ ಖಾತೆ ತೆರೆದಿದ್ದರು. ಅದರ ಮೂಲಕವೇ ಅಕ್ರಮವಾಗಿ ವಹಿವಾಟು ನಡೆಸಿದ್ದರು. ಅದನ್ನು ಪ್ರಶ್ನಿಸಿದ್ದ ಚಾಲಕನ ಮೇಲೂ ಆರೋಪಿ ಹಲ್ಲೆ ಮಾಡಿದ್ದ. ಈ ಬಗ್ಗೆ ಚಾಲಕನೂ ದೂರು ನೀಡಿದ್ದರು’ ಎಂದೂ ಮೂಲಗಳು ಹೇಳಿವೆ.

ಹಲವರಿಗೆ ನೋಟಿಸ್

‘ಆರೋಪಿ ಯುವರಾಜ್‌ ಅವರಿಂದ ಹಣ ಪಡೆದಿದ್ದ ಆರೋಪದಡಿ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಲಾಗಿದೆ. ಮತ್ತಷ್ಟು ಮಂದಿ ಹೆಸರುಗಳನ್ನು ಆರೋಪಿಯು ಬಾಯ್ಬಿಟ್ಟಿದ್ದಾರೆ. ಅವರಿಗೂ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.

ಬಿಎಸ್‌ವೈ ಪದಚ್ಯುತಿಯ ಸೂತ್ರಧಾರಿ?

‘ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಲು ಸೂತ್ರ ರೂಪಿಸಿರುವ ಕರ್ನಾಟಕದ ಮೂಲದ ಪ್ರಭಾವಿ ಮುಖಂಡ ಹಾಗೂ ಉತ್ತರ ಕರ್ನಾಟಕದ ರಾಜಕಾರಣಿ ಸೇರಿ ಹಲವರು ಪ್ರಯತ್ನಿಸುತ್ತಿದ್ದರು. ಇದೇ ತಂಡದಲ್ಲಿ ಯುವರಾಜ್ ಸಹ ಗುರುತಿಸಿಕೊಂಡಿದ್ದರು’ ಎಂದೂ ಮೂಲಗಳು ಹೇಳಿವೆ. ‘ಜನರನ್ನು ವಂಚಿಸಿ ಸಂಪಾದಿಸಿದ್ದ ಹಣವನ್ನು ಯುವರಾಜ್‌, ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಇತರರಿಗೆ ನೀಡಿದ್ದರು. ಹಣ ಪಡೆದವರ ಪಟ್ಟಿಯನ್ನೂ ಸಿಸಿಬಿ ಸಿದ್ಧಪಡಿಸುತ್ತಿದೆ’ ಎಂದೂ ತಿಳಿಸಿವೆ.

‘ನಿವೃತ್ತ ಎಸ್ಪಿ ಮಧ್ಯವರ್ತಿ’

‘ಜನರ ಸಂಪರ್ಕ ಹಾಗೂ ಹಣ ಸಂಗ್ರಹಕ್ಕಾಗಿ ಆರೋಪಿಯು ನಿವೃತ್ತ ಎಸ್ಪಿ ಪಾಪಯ್ಯ ಅವರನ್ನು ಮಧ್ಯವರ್ತಿಯಾಗಿ ಬಳಸಿಕೊಂಡಿದ್ದರು. ಜ್ಯೋತಿಷ್ಯ ಹೇಳಿಸುವುದಾಗಿ ಯುವರಾಜ್ ಬಳಿ ಜನರನ್ನು ಕರೆತರುತ್ತಿದ್ದ ನಿವೃತ್ತ ಎಸ್ಪಿ, ಜನರಿಗೆ ಆಮಿಷವೊಡುತ್ತಿದ್ದರು. ನಂತರ ಹಣ ಸಂಗ್ರಹಿಸಿ ಯುವರಾಜ್‌ ಅವರಿಗೆ ನೀಡುತ್ತಿದ್ದರು. ಅದರಲ್ಲಿ ನಿವೃತ್ತ ಎಸ್ಪಿ ಕಮಿಷನ್ ಪಡೆಯುತ್ತಿದ್ದರು’ ಎಂದೂ ಮೂಲಗಳು ಹೇಳಿವೆ.

‘ಉನ್ನತ ಹುದ್ದೆಯಲ್ಲಿದ್ದ ಮಹಿಳೆಯೊಬ್ಬರನ್ನು ರಾಜ್ಯಪಾಲರನ್ನಾಗಿ ಮಾಡಿಸುವ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ಪಡೆಯಲಾಗಿತ್ತು. ಈ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವರಾಜ್ ಹಾಗೂ ನಿವೃತ್ತ ಎಸ್ಪಿ ಪಾಪಯ್ಯ, ಆರೋಪಿಗಳಾಗಿದ್ದಾರೆ. ಯುವರಾಜ್ ಮಾತ್ರ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಪಾಪಯ್ಯ ತಲೆಮರೆಸಿಕೊಂಡಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.