ADVERTISEMENT

ಹೆಲ್ಪ್‌ ಲೈನ್‌ ಒಬ್ಬರಿಗೆ ₹ 4 ಲಕ್ಷ ವೇತನ: ತನಿಖೆಗೆ ಸಚಿವ ಜಮೀರ್‌ ಆದೇಶ

ಮುಖ್ಯ ಕಾರ್ಯದರ್ಶಿಗಿಂತ 3 ಪಟ್ಟು ವೇತನ ‌ನೀಡಿದ್ದು ಹೇಗೆ– ಸಚಿವ ಜಮೀರ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2023, 18:53 IST
Last Updated 12 ಜೂನ್ 2023, 18:53 IST
ಸಚಿವ ಜಮೀರ್‌ ಅಹ್ಮದ್‌ಖಾನ್‌
ಸಚಿವ ಜಮೀರ್‌ ಅಹ್ಮದ್‌ಖಾನ್‌    

ಬೆಂಗಳೂರು: ‘ಅಲ್ಪಸಂಖ್ಯಾತರ ಇಲಾಖೆಯಲ್ಲಿ ಯೋಜನೆಗಳ ಕುರಿತು ಮಾಹಿತಿ ನೀಡಲು ಸ್ಥಾಪಿಸಿದ ಸಹಾಯವಾಣಿ ನಿರ್ವಹಿಸಿದ ಒಬ್ಬರಿಗೆ ತಿಂಗಳಿಗೆ ₹ 4 ಲಕ್ಷ ವೇತನ ನೀಡಿದ ಮತ್ತು ಅದರಿಂದ ಪ್ರಯೋಜನ ಆಗದಿದ್ದರೂ ಮುಂದುವರಿಸಿದ ಬಗ್ಗೆ ತನಿಖೆ ನಡೆಸಿ ವರದಿ ನೀಡಬೇಕು’ ಎಂದು ಅಧಿಕಾರಿಗಳಿಗೆ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಜೆಡ್. ಜಮೀರ್ ಅಹಮದ್ ಸೂಚನೆ ನೀಡಿದರು.

ಸೋಮವಾರ ಅವರು ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

‘ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನೀಡುವುದಕ್ಕಿಂತ ಮೂರು ಪಟ್ಟು ವೇತನ ‌ನೀಡಿದ್ದು ಹೇಗೆ? ಸಹಾಯವಾಣಿ ಕೇಂದ್ರಕ್ಕೆ ವಾರ್ಷಿಕ ₹ 2.5 ಕೋಟಿ ವೆಚ್ಚ ಮಾಡುತ್ತಿದ್ದರೂ ಪ್ರತ್ಯೇಕವಾಗಿ ಸಹಾಯವಾಣಿ ವ್ಯವಸ್ಥೆಯ ಅಗತ್ಯವೇನಿತ್ತು? ಈ ಕುರಿತು ತನಿಖೆ ಮಾಡಬೇಕು’ ಎಂದೂ ಸಚಿವರು ತಿಳಿಸಿದರು.

ADVERTISEMENT

ಅಲ್ಪಸಂಖ್ಯಾತ ಕಾಲೊನಿ ಅಭಿವೃದ್ಧಿ ಯೋಜನೆಯಲ್ಲಿ ಐದು ವರ್ಷಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ಗುತ್ತಿಗೆದಾರರಿಗೆ ಪಾವತಿಸಿದ ಮೊತ್ತದ ಮಾಹಿತಿ ನೀಡುವಂತೆ ಸೂಚಿಸಿದ ಸಚಿವರು, ಕಾಲೊನಿಗಳ ಅಭಿವೃದ್ಧಿ ಪ್ರಸ್ತಾವನೆ ಬಂದರೆ ಸ್ಥಳಕ್ಕೆ ತೆರಳಿ ವರದಿ ಕೊಡಲು ತಜ್ಞರ ತಂಡ ರಚಿಸುವಂತೆ ಸೂಚಿಸಿದರು.

ಬಾಡಿಗೆ ಕಟ್ಟಡದಲ್ಲಿರುವ 29 ಅಲ್ಪಸಂಖ್ಯಾತ ವಸತಿ ಶಾಲಾ ಕಾಲೇಜುಗಳು ಒಂದು ವರ್ಷದಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಬೇಕು. ವಿದ್ಯಾಸಿರಿ ಯೋಜನೆಯಡಿಯಲ್ಲಿ ಹಾಸ್ಟೆಲ್ ವ್ಯವಸ್ಥೆ ಸಿಗದ 18,800 ವಿದ್ಯಾರ್ಥಿಗಳಿಗೆ ವಾರ್ಷಿಕ ₹ 27 ಕೋಟಿ ಪಾವತಿಸುತ್ತಿದ್ದು, ಅದನ್ನು ತಪ್ಪಿಸಲು ಹೊಸ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಜಮೀನು ಗುರುತಿಸಬೇಕು ಎಂದೂ ನಿರ್ದೇಶನ ನೀಡಿದರು.

‘ಸಮುದಾಯ ಭವನ ನವೀಕರಣ, ಹೊಸ ಸಮುದಾಯ ಭವನ ನಿರ್ಮಾಣ ಸೇರಿ ಯಾವುದೇ ಕಾಮಗಾರಿಗಳಲ್ಲಿ ದುರುಪಯೋಗ, ಲೋಪ ಕಂಡುಬಂದರೆ ಕ್ರಮ ಖಚಿತ’ ಎಂದು ಎಚ್ಚರಿಕೆ ನೀಡಿದರು.

ಅಪೂರ್ಣಗೊಂಡಿರುವ 126 ಶಾದಿ ಮಹಲ್‌ಗಳ ಕಾಮಗಾರಿ ಪೂರ್ಣಗೊಳಿಸಲು ₹ 56 ಕೋಟಿ ಅಗತ್ಯವಿದ್ದು, ಹೊಸದಾಗಿ ಶಾದಿ ಮಹಲ್ ನಿರ್ಮಾಣಕ್ಕೂ ಬೇಡಿಕೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶಕ ರಾಘವೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.