ADVERTISEMENT

ಗ್ರಾ.ಪಂ ಸದಸ್ಯನ ವಿರುದ್ಧ ಕ್ರಿಮಿನಲ್ ಕೇಸ್‌ ದಾಖಲಿಸಲು ಸಿಇಒ ಆದೇಶ

ಹೆಬ್ಬಾಳಕರ ಸಹೋದರನಿಗೆ ಕಾನೂನುಬಾಹಿರವಾಗಿ ರಹವಾಸಿ ಪ್ರಮಾಣಪತ್ರ;

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 15:33 IST
Last Updated 18 ಫೆಬ್ರುವರಿ 2020, 15:33 IST

ಬೆಳಗಾವಿ: ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ ಅವರಿಗೆ ಕಾನೂನು ಬಾಹಿರವಾಗಿ ರಹವಾಸಿ ಪತ್ರ ನೀಡಿರುವ ಮೋದಗ ಗ್ರಾಮ ಪಂಚಾಯ್ತಿ ಸದಸ್ಯ ಬಾಬು ಕಾಳೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಪಿಡಿಒ ಅವರಿಗೆ ಆದೇಶ ನೀಡಿದ್ದಾರೆ.

ತಮ್ಮ ಗ್ರಾಮದಲ್ಲಿ ಚನ್ನರಾಜ ವಾಸಿಸುತ್ತಿರುವುದಾಗಿ ಬಾಬು ಕಾಳೆ ರಹವಾಸಿ ಪ್ರಮಾಣ ಪತ್ರ ನೀಡಿದ್ದರು. ಇದೇ ಪ್ರಮಾಣ ಪತ್ರವನ್ನು ಬಳಸಿಕೊಂಡು ಚನ್ನರಾಜ ಮೋದಗಾ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಸ್ಪರ್ಧಿಸಿ, ಅವಿರೋಧವಾಗಿ ಆಯ್ಕೆಯಾಗಿದ್ದರು.

‘ಚನ್ನರಾಜ ಮೋದಗಾ ಗ್ರಾಮದ ನಿವಾಸಿಯಲ್ಲ. ಬಾಬು ಕಾಳೆ ನೀಡಿರುವುದು ಸುಳ್ಳು ಪ್ರಮಾಣಪತ್ರ. ಇವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಭಾರತೀಯ ಕೃಷಿಕ ಸಮಾಜದ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ದೂರು ನೀಡಿದ್ದರು.

ADVERTISEMENT

ಕ್ರಮಕ್ಕೆ ಸೂಚನೆ:

‘ರಹವಾಸಿ ಪ್ರಮಾಣಪತ್ರವನ್ನು ವಿತರಿಸಲು ಗ್ರಾಮ ಪಂಚಾಯ್ತಿ ಸದಸ್ಯರಿಗೆ ಯಾವುದೇ ಅಧಿಕಾರ ಇರುವುದಿಲ್ಲ, ಕಂದಾಯ ಇಲಾಖೆಯ ಅಧಿಕಾರಿಗಳು ವಿತರಿಸಬೇಕು. ಚನ್ನರಾಜ ಅವರಿಗೆ ಕಾನೂನು ಬಾಹಿರವಾಗಿ ಪಂಚಾಯ್ತಿಯ ಸದಸ್ಯರೊಬ್ಬರು ನೀಡಿದ್ದಾರೆ ಎನ್ನುವ ದೂರು ಬಂದಿತ್ತು. ಇದರ ಅನ್ವಯ ರಹವಾಸಿ ಪ್ರಮಾಣಪತ್ರವನ್ನು ಪರಿಶೀಲಿಸಿ, ಕಾನೂನು ಬಾಹಿರವಾಗಿದ್ದರೆ ಸದಸ್ಯರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಎಂದು ಪಿಡಿಒ ಅವರಿಗೆ ಆದೇಶಿಸಿದ್ದೇನೆ’ ಎಂದು ಸಿಇಒ ಡಾ.ರಾಜೇಂದ್ರ ಕೆ.ವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.