ADVERTISEMENT

ಉಗ್ರ ಸಂಘಟನೆ: ವಿಶ್ವಸಂಸ್ಥೆ ವರದಿ ನಿಜ ಎಂದ ಕೇರಳ ಪೊಲೀಸ್‌ ಮುಖ್ಯಸ್ಥ ಬೆಹೆರಾ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 16:32 IST
Last Updated 25 ಜುಲೈ 2020, 16:32 IST
ಲೋಕನಾಥ್‌ ಬೆಹೆರಾ
ಲೋಕನಾಥ್‌ ಬೆಹೆರಾ   

ತಿರುವನಂತಪುರ: ‘ರಾಜ್ಯದ ಹಲವಾರು ಯುವಕರನ್ನು ಐಎಸ್‌ಐಎಸ್‌ ಸಂಘಟನೆ ತೀವ್ರಗಾಮಿಗಳನ್ನಾಗಿ ಮಾಡಿರುವುದು ವಾಸ್ತವ ಸಂಗತಿ. ಸಂಘಟನೆಯನ್ನು ಸೇರಿರುವ ಕೆಲವರನ್ನು ಪೊಲೀಸರು ಪತ್ತೆ ಮಾಡಿದ್ದಾರೆ’ ಎಂದು ಕೇರಳ ಪೊಲೀಸ್‌ ಮುಖ್ಯಸ್ಥ ಲೋಕನಾಥ್‌ ಬೆಹೆರಾ ಹೇಳಿದರು.

ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಐಎಸ್‌ ಸಂಘಟನೆಗೆ ಸೇರಿದ ಉಗ್ರರು ಗಣನೀಯ ಸಂಖ್ಯೆಯಲ್ಲಿದ್ದಾರೆ ಎಂಬ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಭಯೋತ್ಪಾದನೆ ಕುರಿತ ವರದಿಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

‘ಬಹಳಷ್ಟು ಸಂಖ್ಯೆಯ ಯುವಕರು ರಾಜ್ಯವನ್ನು ತೊರೆದಿದ್ದಾರೆ. ಕೆಲವರು ಮೃತಪಟ್ಟಿದ್ದಾರೆ. ಹಾಗಂತ, ನಾವು ಈ ವಿಷಯವನ್ನು ಅಲಕ್ಷ್ಯ ಮಾಡಿಲ್ಲ. ಐಎಸ್‌ಐಎಸ್‌ ಸಂಘಟನೆ ಸೇರಿದವರ ಹಾಗೂ ಸೇರುತ್ತಿರುವವರನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿಸಿದ್ದೇವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ಕೆಲವು ವರ್ಷಗಳ ಅವಧಿಯಲ್ಲಿ 98 ಜನ ಮಲಯಾಳಿಗಳು ಐಎಸ್‌ಐಎಸ್‌ ಸೇರಿದ್ದಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ಇರುವ ಕೇರಳಿಗರೂ ಈ ಸಂಘಟನೆ ಸೇರಿದ್ದಾರೆ ಎಂದು ಪೊಲೀಸ್‌ ಮೂಲಗಳು ಹೇಳುತ್ತವೆ. ಅಲ್ಲದೇ, ಎನ್‌ಕೌಂಟರ್‌ನಲ್ಲಿ 28 ಜನರು ಸಾವನ್ನಪ್ಪಿದ್ದಾರೆ ಎಂದು ಇವೇ ಮೂಲಗಳು ಹೇಳುತ್ತವೆ.

‘ಉಗ್ರ ಸಂಘಟನೆ ಸೇರುತ್ತಿರುವವರ ಮೇಲೆ ತನಿಖಾ ಸಂಸ್ಥೆಗಳು ನಿಗಾ ಇಟ್ಟಿವೆ. ತೀವ್ರವಾದನ್ನು ಬಿಟ್ಟು, ಮುಖ್ಯವಾಹಿನಿಗೆ ಬರುವಂತೆ ಯುವಕರಿಗೆ ತಿಳಿ ಹೇಳುವ ಕೆಲಸವನ್ನು ಸಹ ಇಲಾಖೆಮಾಡುತ್ತಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.