
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಬವೇರಿಯಾ: ಜರ್ಮನಿಯ ಬವೇರಿಯಾ (Bavaria) ಪ್ರಾಂತ್ಯದಲ್ಲಿ ಇತ್ತೀಚೆಗೆ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಡೋನೌ ನದಿಯ ತೀರದಲ್ಲಿನ ಇಂಗೋಲ್‌ಸ್ಟಾಡ್ಟ್‌ನಲ್ಲಿರುವ ಕನ್ನಡಿಗರು ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವನ್ನು ಆಚರಣೆ ಮಾಡಿದರು. ಇಲ್ಲಿನ ಕನ್ನಡ ಕೂಟದ ಸದಸ್ಯರು ಪ್ರೀತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕನ್ನಡ ನುಡಿ, ಕಲೆ ಮತ್ತು ಸಂಸ್ಕೃತಿಯ ಸೊಗಡು ತುಂಬಿಕೊಂಡಿತ್ತು.
ರಾಜ್ಯೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕನ್ನಡ ಹಾಡು, ನೃತ್ಯ, ಸಂಗೀತ, ಕವನ ವಾಚನ, ಪಿಟೀಲು ವಾದನ ಹಾಗೂ ಮಕ್ಕಳ ಪ್ರತಿಭಾ ಪ್ರದರ್ಶನಗಳು (ಪಿಯಾನೋ ವಾದನ, ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಇತ್ಯಾದಿಗಳು) ಎಲ್ಲರ ಮನಗೆದ್ದವು.
ಯುವ ಲೇಖಕಿ ಬಿಂದು ರವಿಶಂಕರ್ ಅವರು ಬರೆದಿರುವ ‘ಕನ್ನಡಿಗರ ಜರ್ಮನ್ ಜೀವನ‘ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮನ ಗೆದ್ದಿತು. ಈ ಸಣ್ಣ ನಾಟಕ ವಿದೇಶದಲ್ಲಿ ಬದುಕುತ್ತಿರುವ ಕನ್ನಡಿಗರ ದಿನನಿತ್ಯದ ಅನುಭವಗಳು, ಅವರ ಹಾಸ್ಯ, ಸವಾಲುಗಳು ಮತ್ತು ಸಂಸ್ಕೃತಿಯ ನಂಟುಗಳನ್ನು ಮನರಂಜನಾತ್ಮಕವಾಗಿ ಚಿತ್ರಿಸಿತು. ನಾಟಕದ ವಿಶೇಷವೆಂದರೆ, ಇದು ಕನ್ನಡದಿಂದ ಇಂಗ್ಲಿಷ್ ಮೂಲಕ ಜರ್ಮನ್ ಭಾಷೆ ಕಲಿಯುವ ಜೀವನದ ಪಯಣವನ್ನು ಸುಂದರವಾಗಿ ಚಿತ್ರಿಸುತ್ತದೆ.
ರಾಜ್ಯೋತ್ಸವ ಕನ್ನಡಿಗರ ಹೃದಯಗಳನ್ನು ಒಂದಾಗಿಸಿದ ಭಾವದ ಸೇತುವೆ, ಈ ಸಂಭ್ರಮ ವಿದೇಶದಲ್ಲಿರುವ ಕನ್ನಡಿಗರ ಏಕತೆ, ಸಂಸ್ಕೃತಿ ಮತ್ತು ಗುರುತಿನ ಸಂಕೇತವಾಗಿ ಪ್ರತಿಬಿಂಬಿಸಿತು. ಮಕ್ಕಳಿಗೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಮೆರುಗು ತೋರಿಸಿ, ಅವರಲ್ಲಿ ಕನ್ನಡ ಸಂಸ್ಕೃತಿ ಅಳವಡಿಸಿಕೊಳ್ಳುವ ಆಸಕ್ತಿ ಮತ್ತು ಹೆಮ್ಮೆ ಹುಟ್ಟಿಸಿತು. ಈ ಕಾರ್ಯಕ್ರಮವು ಕೇವಲ ಉತ್ಸವವಲ್ಲ, ಪ್ರತಿಯೊಬ್ಬರಿಗೂ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಆಗಿ ಪರಿಣಮಿಸಿತು ಎಂಬುದು ಅಲ್ಲಿನ ಕನ್ನಡಿಗರ ಅಭಿಪ್ರಾಯ.
ಕನ್ನಡ ಕೂಟ ಪರಿಚಯ ಮತ್ತು ಚಟುವಟಿಕೆಗಳು: ಇಂಗೋಲ್‌ಸ್ಟಾಡ್ಟ್ ಕನ್ನಡಿಗರು (INKA) ಎಂಬ ಹೆಸರಿನ ಈ ಕನ್ನಡ ಕೂಟವು 2018ರಲ್ಲಿ ಸ್ಥಾಪಿತಗೊಂಡಿದ್ದು, ಇದರ ಸ್ಥಾಪಕರಾಗಿ ಚಿದಂಬರ ದೊಡ್ಡಮನಿ ಮತ್ತು ಅವರ ಸ್ನೇಹಿತರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಘಟನೆ ವಿದೇಶದಲ್ಲಿ ಕನ್ನಡ ಸಂಸ್ಕೃತಿಯನ್ನು ಜೀವಂತವಾಗಿ ಉಳಿಸಿಕೊಳ್ಳುತ್ತಿರುವ ಬಲವಾದ ವೇದಿಕೆಯಾಗಿ ಬೆಳೆದಿದೆ.
ಈ ಕನ್ನಡ ಕೂಟವು ವರ್ಷಪೂರ್ತಿ ಹಲವಾರು ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅವುಗಳಲ್ಲಿ ಯುಗಾದಿ ಹಬ್ಬ, ಫುಡ್ ಫೆಸ್ಟಿವಲ್, ಫ್ಯಾಮಿಲಿ ಗ್ಯಾದರಿಂಗ್, ರಾಜ್ಯೋತ್ಸವ ಪ್ರಮುಖವಾದವು. ಸಾಗರದಾಚೆಯೂ ಕನ್ನಡದ ನಾದವನ್ನು ಜೀವಂತವಾಗಿಡುವುದು, ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಗಡಿ ದಾಟಿ ಹರಡುವುದು– ಇಂಗೋಲ್‌ಸ್ಟಾಡ್ಟ್ ಕನ್ನಡಿಗರು (INKA) ಕನ್ನಡ ಕೂಟದ ಮೂಲ ಧ್ಯೇಯವಾಗಿದೆ
ವರದಿ: ಸುನೀಲ್ ತುಂಬಗಿ
ಇನ್‌ಸ್ಟಾ ಪೇಜ್: @ingolstadt_kannadigaru(INKA)
ಕಾರ್ಯಕ್ರಮದಲ್ಲಿ ನೆರದಿದ್ದ ಜನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.