ADVERTISEMENT

‘ಪ್ರಜಾಪ್ರಭುತ್ವ ಸರ್ಕಾರಿ ವ್ಯವಸ್ಥೆಯಲ್ಲ, ಹೊಣೆಗಾರಿಕೆ’

ಜರ್ಮನಿಯ ಬರ್ಲಿನ್‌ನ ಹರ್ಟೀ ಶಾಲೆಯಲ್ಲಿ ರಾಹುಲ್ ಗಾಂಧಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 15:50 IST
Last Updated 19 ಡಿಸೆಂಬರ್ 2025, 15:50 IST
ಜರ್ಮನಿಯ ಬರ್ಲಿನ್‌ನ ಹರ್ಟೀ ಶಾಲೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು – ಪಿಟಿಐ ಚಿತ್ರ
ಜರ್ಮನಿಯ ಬರ್ಲಿನ್‌ನ ಹರ್ಟೀ ಶಾಲೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು – ಪಿಟಿಐ ಚಿತ್ರ   

ಬರ್ಲಿನ್‌ನ ಹರ್ಟೀ: ಜರ್ಮನಿಯ ಪ್ರವಾಸದಲ್ಲಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಅಲ್ಲಿನ ಚಿಂತಕರು, ತಜ್ಞರೊಂದಿಗೆ ಸಂವಾದ ನಡೆಸಿದರು. ವೇಗವಾಗಿ ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಭಾರತದ ಪಥದ ಬಗ್ಗೆ ಮಾತನಾಡಿದರು.

ಬರ್ಲಿನ್‌ನ ಹರ್ಟೀ ಶಾಲೆಯಲ್ಲಿ ವಿದ್ಯಾರ್ಥಿಗಳು, ವಿದ್ವಾಂಸರು ಮತ್ತು ಶಿಕ್ಷಣ ತಜ್ಞರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ‘ಪ್ರಜಾಪ್ರಭುತ್ವವು ಕೇವಲ ಸರ್ಕಾರಿ ವ್ಯವಸ್ಥೆಯಲ್ಲ, ಅದು ತೊಡಗಿಸಿಕೊಳ್ಳುವಿಕೆ, ಜವಾಬ್ದಾರಿ ಮತ್ತು ಹೊಣೆಗಾರಿಕೆಯ ನಿರಂತರ ಪ್ರಕ್ರಿಯೆಯಾಗಿದೆ’ ಎಂದು ಹೇಳಿದರು.

ಸದ್ಯದ ಜಾಗತಿಕ ಸನ್ನಿವೇಶದಲ್ಲಿ ನಾಯಕತ್ವ ಮತ್ತು ಪ್ರಜಾಪ್ರಭುತ್ವದ ಪ್ರಾಮುಖ್ಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಮಗ್ರ ಮತ್ತು ಸಮಾನ ಶಿಕ್ಷಣದ ಮಹತ್ವ ಹಾಗೂ ಆಳವಾಗಿ ಬೇರೂರಿರುವ ಅಸಮಾನತೆಗಳನ್ನು ಪರಿಹರಿಸಲು ಜಾಗತಿಕ ಸಹಕಾರದ ಅಗತ್ಯವನ್ನು ಒತ್ತಿ ಹೇಳಿದರು.

ADVERTISEMENT

ಬರ್ಲಿನ್‌ನಲ್ಲಿ ಸಾಗರೋತ್ತರ ಭಾರತೀಯ ಕಾಂಗ್ರೆಸ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪಕ್ಷವು ಸತ್ಯದ ಪರವಾಗಿ ನಿಂತಿದೆ. ಭಾರತದ ಸತ್ಯವನ್ನು ಸಮರ್ಥಿಸಿಕೊಂಡಿದೆ’ ಎಂದರು.

‘ಸಂಸ್ಕೃತಿಗಳ ಬೆಸುಗೆ’ ಕಾರ್ಯಕ್ರಮದಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಸತ್ಯ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ತಮ್ಮ ಪಕ್ಷಕ್ಕಿರುವ ಬದ್ಧತೆಯನ್ನು ಪುನರುಚ್ಚರಿಸಿದರು.

ರಾಹುಲ್‌ ಅವರು ಜರ್ಮನಿಯ ಮಾಜಿ ಚಾನ್ಸೆಲರ್‌ ಒಲಾಫ್‌ ಶ್ಕೋಲ್ಜ್ ಅವರೊಂದಿಗೆ ಔತಣಕೂಟದ ಬಳಿಕ ಚರ್ಚೆ ನಡೆಸಿದರು.

ಇಬ್ಬರು ನಾಯಕರು ಜಾಗತಿಕ ವ್ಯವಹಾರಗಳು, ವ್ಯಾಪಾರ ಮತ್ತು ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತ–ಜರ್ಮನಿ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಸುದೀರ್ಘವಾಗಿ ಮಾತನಾಡಿದರು ಎಂದು ಸಾಗರೋತ್ತರ ಭಾರತೀಯ ಕಾಂಗ್ರೆಸ್‌ ‘ಎಕ್ಸ್‌’ನಲ್ಲಿ ತಿಳಿಸಿದೆ.

ಜರ್ಮನಿಯ ಪರಿಸರ ಮತ್ತು ಹವಾಮಾನ ಸಂರಕ್ಷಣಾ ಸಚಿವ ಕರ್ಸ್ಟನ್‌ ಶ್ನೇಯ್ಡರ್ ಅವರೊಂದಿಗೂ ಚರ್ಚಿಸಿದರು. ಹವಾಮಾನ ಬದಲಾವಣೆ ಸವಾಲುಗಳನ್ನು ಮತ್ತು ಭವಿಷ್ಯಕ್ಕೆ ಸುಸ್ಥಿರ, ಜನ–ಕೇಂದ್ರಿತ ಪರಿಹಾರಗಳು ಎಷ್ಟು ನಿರ್ಣಾಯಕವಾಗಿವೆ ಎಂಬುದರ ಕುರಿತು ಚರ್ಚಿಸಿದರು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.