ADVERTISEMENT

ಅಕಿಹಿಟೊ ಪದತ್ಯಾಗಕ್ಕೆ ಸಂಸತ್ತು ಒಪ್ಪಿಗೆ

ಏಜೆನ್ಸೀಸ್
Published 9 ಜೂನ್ 2017, 19:30 IST
Last Updated 9 ಜೂನ್ 2017, 19:30 IST
ಅಕಿಹಿಟೊ
ಅಕಿಹಿಟೊ   

ಟೋಕಿಯೊ: ವೃದ್ಧಾಪ್ಯದಿಂದ ಬಳಲುತ್ತಿರುವ ಜಪಾನ್‌ನ ರಾಜ 83 ವರ್ಷದ ಅಕಿಹಿಟೊ ಸಿಂಹಾಸನದಿಂದ ಕೆಳಗಿಳಿಯಲು ಅವಕಾಶ ಕೊಡುವ ಕಾನೂನಿಗೆ ಜಪಾನ್‌ ಸಂಸತ್ತು ಶುಕ್ರವಾರ ಅನುಮೋದನೆ ನೀಡಿದೆ. ಈ ಕ್ರಮ ಜಪಾನ್‌ನ 200 ವರ್ಷಗಳಲ್ಲಿ ಮೊದಲನೆಯದು.

ಜಪಾನ್‌ನ ಕಾನೂನಿನ ಪ್ರಕಾರ, ರಾಜನೊಬ್ಬ ಬದುಕಿದ್ದಾಗಲೇ ಸಿಂಹಾಸನವನ್ನು ಬೇರೆಯವರಿಗೆ ಬಿಟ್ಟುಕೊಡಲು ಸಾಧ್ಯವಿಲ್ಲ. ಹೊಸ ಕಾನೂನಿನಿಂದಾಗಿ ಅಕಿಹಿಟೊ ಸ್ಥಾನವನ್ನು ಅವರ ದೊಡ್ಡ ಮಗ ನರುಹಿಟೊ ಅಲಂಕರಿಸಲಿದ್ದಾರೆ.

ಮೂತ್ರಪಿಂಡ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಕಿಹಿಟೊ ಹುದ್ದೆ ಪದತ್ಯಾಗ ಮಾಡುವುದಾಗಿ ಕಳೆದ ವರ್ಷ ತಿಳಿಸಿದ್ದರು. ಇದು ಜಪಾನ್‌ನಲ್ಲಿ ಭಾರೀ ಚರ್ಚೆಗೂ ಗ್ರಾಸವಾಗಿತ್ತು. ಇದೀಗ ಹೊಸ ಕಾನೂನು ರಚನೆ ಮೂಲಕ ಅಕಿಹಿಟೊ ನಿರ್ಧಾರಕ್ಕೆ ಬೆಂಬಲ ಸಿಕ್ಕಿದಂತಾಗಿದೆ.

ADVERTISEMENT

ಆತ್ಮಾಹುತಿ ದಾಳಿ: 30 ಸಾವು
ಹಿಲ್ಲಾ (ಇರಾಕ್‌) (ರಾಯಿಟರ್ಸ್‌): ಬಾಗ್ದಾದ್‌ನ ಮುಸಾಯಿಬ್‌ ಪಟ್ಟಣದ ಸಂತೆಯಲ್ಲಿ ಶುಕ್ರವಾರ ಮಹಿಳೆಯೊಬ್ಬಳು ನಡೆಸಿದ ಆತ್ಮಾಹುತಿ ದಾಳಿಗೆ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದು, 35ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಬೆಳಿಗ್ಗೆ ಸುಮಾರು 11.30ರ ಹೊತ್ತಿಗೆ ಈ ಘಟನೆ ನಡೆದಿದೆ. ಇದೇ ವೇಳೆ ಸಮೀಪದ ಕೆರ್ಬಾಬಾ ಪಟ್ಟಣದಲ್ಲಿಯೂ  ಆತ್ಮಾಹುತಿ ದಾಳಿ ನಡೆದಿದ್ದು ನಾಲ್ವರು ಗಾಯಗೊಂಡಿದ್ದಾರೆ. ಇಸ್ಲಾಮಿಕ್‌ ಸ್ಟೇಟ್‌ ಜಿಹಾದಿ ಗುಂಪು ಈ ದಾಳಿಯ ಹೊಣೆ ಹೊತ್ತಿದೆ.

ಚೀನಿಯರ ಹತ್ಯೆ: ಹೊಣೆ ಹೊತ್ತ ಐಎಸ್‌
ಇಸ್ಲಾಮಾಬಾದ್‌(ಪಿಟಿಐ): ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಇತ್ತೀಚೆಗೆ ನಡೆದ ಇಬ್ಬರು ಚೀನಿಯರ ಹತ್ಯೆಯ ಹೊಣೆಯನ್ನು ಐಎಸ್‌ ಹೊತ್ತುಕೊಂಡಿದೆ.

ಪಾಕಿಸ್ತಾನದ ವಾಯವ್ಯ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಉರ್ದು ಕಲಿಕಾ ಕೇಂದ್ರದಲ್ಲಿ ಉರ್ದು ಕಲಿಯುತ್ತಿದ್ದ ಚೀನಾ ಸಂಜಾತ ಮಹಿಳೆ ಮತ್ತು ಪುರುಷನನ್ನು ಬಂದೂಕುಧಾರಿಯೊಬ್ಬ ಕಳೆದ ತಿಂಗಳು ಅಪಹರಿಸಿ ಹತ್ಯೆ ಮಾಡಿದ್ದ. ಈ ಘಟನೆಯಲ್ಲಿ ಮತ್ತೊಬ್ಬ ಚೀನಿ ಮಹಿಳೆ ತಪ್ಪಿಸಿಕೊಂಡಿದ್ದರು.

ಅಮೆರಿಕ, ಸೌದಿ ವಿರುದ್ಧ ಇರಾನ್‌ ಕಿಡಿ 
ಟೆಹರಾನ್‌(ಎಎಫ್‌ಪಿ)
: ಇರಾನ್‌ ಸಂಸತ್ತು ಮತ್ತು ಖೊಮೆನಿ ಸಮಾಧಿಯ ಮೇಲೆ ನಡೆದ ಐಎಸ್‌ ದಾಳಿಗೆ ಸಂಬಂಧಿಸಿದಂತೆ  ಅಮೆರಿಕ ಮತ್ತು ಸೌದಿ ಅರೇಬಿಯ ರಾಷ್ಟ್ರಗಳ ಮೇಲೆ ಇರಾನ್‌ ಕಿಡಿ ಕಾರಿದೆ.

ದಾಳಿಯಲ್ಲಿ ಮೃತಪಟ್ಟವರ ಶವಸಂಸ್ಕಾರದ ವೇಳೆ ಅಧ್ಯಕ್ಷ ಹಸನ್‌ ರೊಹಾನಿ ಅವರ ಉಪಸ್ಥಿತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ‘ಇಂತಹ ಚಟುವಟಿಕೆಗಳು ಅಮೆರಿಕ ಮತ್ತು ಅದರ ಬೆಂಬಲಿತ ರಾಷ್ಟ್ರಗಳಿಗೆ ದ್ವೇಷವನ್ನು ಬಲಪಡಿಸುವುದಕ್ಕಷ್ಟೇ ಸಹಾಯವಾಗಲಿದೆ’ ಎಂದು ಹಸನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.