ADVERTISEMENT

ಅಜ್ಞಾತ ಸ್ಥಳದಲ್ಲಿ ಮೊರ್ಸಿ ತೀವ್ರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2013, 19:59 IST
Last Updated 14 ಜುಲೈ 2013, 19:59 IST

ಕೈರೊ (ಪಿಟಿಐ):  ಹಿಂಸಾಕೃತದಲ್ಲಿ ತೊಡಗಿ ದೇಶದ ಅರ್ಥ ವ್ಯವಸ್ಥೆಗೆ ಹಾನಿಯುಂಟು ಮಾಡಿದ ಆಪಾದನೆಗಳಿಗೆ ಸಿಲುಕಿರುವ ಈಜಿಪ್ಟ್ ಪದಚ್ಯುತ ಅಧ್ಯಕ್ಷ ಮಹಮ್ಮದ್ ಮೊರ್ಸಿ ಸೇರಿದಂತೆ ಮುಸ್ಲಿ ಬ್ರದರ್‌ಹುಡ್ ಸದಸ್ಯರನ್ನು ಈಜಿಪ್ಟ್ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಆಯ್ಕೆಯಾಗಿದ್ದ ಈಜಿಪ್ಟ್‌ನ ಮೊದಲ ಅಧ್ಯಕ್ಷ 61 ವರ್ಷದ ಮೊರ್ಸಿ ಅವರನ್ನು ಜು.3ರಂದು ಅಲ್ಲಿಯ ಬಲಿಷ್ಠ ಸೇನಾ ಪಡೆಯು ಪದಚ್ಯುತಗೊಳಿಸಿ ಅಜ್ಞಾತ ಸ್ಥಳದಲ್ಲಿ ಇರಿಸಿದೆ.

ಈಗ ಪ್ರಾಸಿಕ್ಯೂಟರ್‌ಗಳು ಅವರನ್ನು ಗೋಪ್ಯ ಸ್ಥಳ ದಲ್ಲೇ ವಿಚಾರ ಣೆಗೆ ಒಳಪಡಿಸಿ ದ್ದಾರೆ ಎಂದು  ಮೂಲಗಳು  ತಿಳಿಸಿವೆ.

ಮೊರ್ಸಿ, ಬ್ರದರ್‌ಹುಡ್  ನಾಯಕರು,  ಇಸ್ಲಾಮಿಕ್ ಚಳವಳಿಯ ಮುಂಚೂಣಿ ನಾಯಕ ಮಹಮ್ಮದ್ ಬದಾಯಿ ಮತ್ತು ಬ್ರದರ್‌ಹುಡ್ ಸಂಘಟನೆಯ ನಾಯಕರ ವಿರುದ್ಧ ದೂರುಗಳು ಬಂದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದೂರು ನೀಡಿರುವವರು ಯಾರು ಎನ್ನುವುದನ್ನು ಪ್ರಾಸಿಕ್ಯೂಟರ್‌ಗಳು ರಹಸ್ಯವಾಗಿಟ್ಟಿದಾರೆ.

ಹಿಂಸಾಚಾರ ಎಸಗಿದ ಮತ್ತು ದೇಶದ ಅರ್ಥ ವ್ಯವಸ್ಥೆಗೆ ಹಾನಿ ಉಂಟು ಮಾಡಿರುವ ಕುರಿತು ನಾಯಕರನ್ನು ವಿಚಾರಣೆ ಮಾಡಲಾಗುತ್ತಿದೆ. ಮೊರ್ಸಿ ಮತ್ತು ಬದಾಯಿ ಸೇರಿದಂತೆ ಎಂಟು ಇಸ್ಲಾಮಿಕ್ ನಾಯಕರ ವಿರುದ್ಧ ದೂರು ಸ್ವೀಕರಿಸಲಾಗಿದೆ ಎಂದು ಪ್ರಾಸಿಕ್ಯೂಟರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಧ್ಯಕ್ಷ ಮೊರ್ಸಿ ಅವರನ್ನು ಪದಚ್ಯುತಗೊಳಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರದ ವಿವಿಧೆಡೆ ಲಕ್ಷಾಂತರ ಜನರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸೇನಾ ಆಡಳಿತ ಮೊರ್ಸಿ ಅವರನ್ನು ಪದಚ್ಯುತಗೊಳಿಸಿತ್ತು.

ಇದನ್ನು ಖಂಡಿಸಿರುವ ಮುಸ್ಲಿಂ ಬ್ರದರ್‌ಹುಡ್ `ಪ್ರಜಾಪ್ರಭುತ್ವವನ್ನು ದಿಢೀರ್ ತಲೆಕೆಳಗೆ ಮಾಡುವ ಯತ್ನ ಇದಾಗಿದೆ' ಎಂದು ದೂರಿದೆ.
ಈಜಿಪ್ಟ್ ದೇಶದ ಕಾನೂನಿನ ಪ್ರಕಾರ, ಪೊಲೀಸರು ಅಥವಾ ಸಾರ್ವಜನಿಕರು ಯಾರೇ ದೂರು ನೀಡಿದರೂ ಅದನ್ನು ತನಿಖೆ ನಡೆಸುವ ಅಧಿಕಾರ ಪ್ರಾಸಿಕ್ಯೂಟರ್‌ಗಳಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.