ADVERTISEMENT

ಅಣ್ವಸ್ತ್ರ ಪ್ರಸರಣ ತಡೆ: ಸಂಘಟಿತ ಯತ್ನಕ್ಕೆ ಚೀನಾ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 19:30 IST
Last Updated 20 ಏಪ್ರಿಲ್ 2012, 19:30 IST

ವಿಶ್ವಸಂಸ್ಥೆ (ಐಎಎನ್‌ಎಸ್): ಅಣ್ವಸ್ತ್ರ ಪ್ರಸರಣ ತಡೆ, ಅಣ್ವಸ್ತ್ರ ನಿಶ್ಶಸ್ತ್ರೀಕರಣ ಮತ್ತು ಪರಮಾಣು ಭದ್ರತೆ ವಿಚಾರದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಚೀನಾ ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದೆ.

ಭಾರತವು ಅಣ್ವಸ್ತ್ರ ಸಿಡಿ ತಲೆಗಳನ್ನು ಹೊತ್ತೊಯ್ಯಬಲ್ಲ ಅಗ್ನಿ-5 ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಮಾರನೇ ದಿನವೇ ಚೀನಾ ಅಂತರರಾಷ್ಟ್ರೀಯ ಸಮುದಾಯಕ್ಕೆ ಈ ರೀತಿ ಕರೆ ನೀಡಿದೆ.

ಭದ್ರತಾ ಮಂಡಲಿಯ ಅಣ್ವಸ್ತ್ರ ಪ್ರಸರಣ ತಡೆಗೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಚೀನಾದ  ಕಾಯಂ ಪ್ರತಿನಿಧಿ ಲಿ ಬೌಡೊಂಗ್, ಅಣ್ವಸ್ತ್ರ ಪ್ರಸರಣ ತಡೆ ವಿಚಾರದಲ್ಲಿ ಅಂತರರಾಷ್ಟ್ರೀಯ ಸಮುದಾಯದಲ್ಲಿ ಇನ್ನೂ ಹೆಚ್ಚಿನ ಸಮನ್ವಯತೆ ಸಾಧಿಸಿದರೆ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಭದ್ರತೆ ನೆಲೆಸಬೇಕಾದರೆ ಅಣ್ವಸ್ತ್ರ ಪ್ರಸರಣ ತಡೆ, ಅಣ್ವಸ್ತ್ರ ನಿಶ್ಶಸ್ತ್ರೀಕರಣ ಹಾಗೂ ಪರಮಾಣು ಭದ್ರತೆ ವಿಚಾರದಲ್ಲಿ ಸಂಘಟಿತ ಕೆಲಸ ಮಾಡುವುದು ಅನಿವಾರ್ಯ. ಈ ವಿಚಾರದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಲಿಯು ತೆಗೆದುಕೊಳ್ಳುವ ಕ್ರಮಗಳಿಗೆ ಚೀನಾ ಸಂಪೂರ್ಣ ಬೆಂಬಲ ನೀಡಲಿದೆ. ಅಣ್ವಸ್ತ್ರ ಪ್ರಸರಣ ತಡೆ ಮತ್ತು ನಿಶ್ಶಸ್ತ್ರೀಕರಣ ವಿಚಾರದಲ್ಲಿ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಮಾಣು ವಿಚಾರದಲ್ಲಿ ಭದ್ರತೆ ಸಾಧಿಸುವುದು ಅಸಾಧ್ಯವಾಗುತ್ತದೆ ಎಂದಿದ್ದಾರೆ.

ಪರಸ್ಪರ ನಂಬಿಕೆ, ಲಾಭ, ಸಮಾನತೆ ಮತ್ತು ಸಮನ್ವಯತೆಯ ಮೂಲಕ ನಾವು ಹೊಸ ಭದ್ರತಾ  ಪರಿಕಲ್ಪನೆಯನ್ನು ಹೊಂದಬೇಕು ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಅಣ್ವಸ್ತ್ರ ಪ್ರಸರಣ ತಡೆಗೆ ಇರುವ ಅಂತರರಾಷ್ಟ್ರೀಯ ವ್ಯವಸ್ಥೆಯು ಶಾಂತಿಯುತ ಪರಮಾಣು ಇಂಧನ ಬಳಕೆಯ ಹಕ್ಕನ್ನು ಗೌರವಿಸಬೇಕು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ದ್ವಿಮುಖ ನೀತಿ ಅನುಸರಿಸಬಾರದು ಎಂದು ಲಿ ಬೌಡೊಂಗ್ ಒತ್ತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.