ADVERTISEMENT

ಅಧಿಕಾರ ದುರ್ಬಳಕೆ ಇಲ್ಲ: ಮುರ್ಸಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2012, 21:51 IST
Last Updated 27 ನವೆಂಬರ್ 2012, 21:51 IST

ಕೈರೊ (ಪಿಟಿಐ): `ಅಧಿಕಾರದಲ್ಲಿ ಮುಂದುವರೆಯಲು ಕಾನೂನು ಅಥವಾ ಅಧಿಕಾರದ ದುರ್ಬಳಕೆ ಮಾಡಿಕೊಂಡಿಲ್ಲ' ಎಂದು ಈಜಿಪ್ಟ್ ಅಧ್ಯಕ್ಷ ಮೊಹಮ್ಮದ್ ಮುರ್ಸಿ ಅವರು ನ್ಯಾಯಾಂಗಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಹಿರಿಯ ನ್ಯಾಯಮೂರ್ತಿಗಳನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಅಧ್ಯಕ್ಷರ ಕಚೇರಿಯಿಂದ ಈ ಪ್ರಕಟಣೆ ಹೊರಬಿದ್ದಿದೆ. `ಅಧ್ಯಕ್ಷರ ನಿರ್ಧಾರಗಳನ್ನು ಯಾರೂ ಪ್ರಶ್ನಿಸದಂತೆ ತಾತ್ಕಾಲಿಕ ಕಾನೂನು ರಿಯಾಯ್ತಿ ನೀಡುವ ಶಾಸನವನ್ನು ಜನತೆ ಹಾಗೂ ವಿರೋಧ ಪಕ್ಷಗಳ ಸದಸ್ಯರು ತಪ್ಪು ತಿಳಿದುಕೊಂಡಿದ್ದಾರೆ' ಎಂದು ಪ್ರಕಟಣೆ ತಿಳಿಸಿದೆ.

ತಮ್ಮ ನಿರ್ಧಾರಗಳನ್ನು ಯಾರೂ ಪ್ರಶ್ನಿಸದಂತೆ ವಿಶೇಷ ರಿಯಾಯ್ತಿ ನೀಡುವ ಶಾಸನ ಜಾರಿಗೊಳಿಸುವ ಮೂಲಕ ಅಧ್ಯಕ್ಷ ಮುರ್ಸಿ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಕಾನೂನಿನ ಸ್ವಾತಂತ್ರ್ಯವನ್ನು ಬಲಿ ಕೊಟ್ಟಿದ್ದಾರೆ ಎಂದು ವಿರೋಧಿಗಳು ಆರೋಪಿಸಿದ್ದಾರೆ.

ADVERTISEMENT

ಈ ನಿರ್ಣಯ ವಿರೋಧಿಸಿ ಆಂದೋಲನ ನಡೆಸಲು ಅವರು ಉದ್ದೇಶಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಮುರ್ಸಿ ಇದೀಗ ತೇಪೆ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ.ಮುರ್ಸಿ ಸರ್ಕಾರ ಈಜಿಪ್ಟ್ ಜನರ ಭಾವನೆಗಳಿಗೆ ಬೆಲೆ ಕೊಡಬೇಕು ಎಂದು ಶ್ವೇತ ಭವನ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.