ADVERTISEMENT

ಅನುಜ್ ಬಿಡ್ವೆ ಶವ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ಲಂಡನ್ (ಪಿಟಿಐ):  ಹತ್ಯೆಗೊಳಗಾದ ಭಾರತೀಯ ವಿದ್ಯಾರ್ಥಿ ಅನುಜ್ ಬಿಡ್ವೆ ಅವರ ಶವವನ್ನು ತನಿಖಾಧಿಕಾರಿಗಳು ಅಂತ್ಯಸಂಸ್ಕಾರ ಮಾಡುವ ಸಂಸ್ಥೆಯೊಂದಕ್ಕೆ ಹಸ್ತಾಂತರಿಸಿದ್ದಾರೆ. ಅಂತ್ಯಸಂಸ್ಕಾರಕ್ಕಾಗಿ ಬಿಡ್ವೆ ಅವರ ಶವವನ್ನು ಅಲ್ಲಿಂದ ಭಾರತಕ್ಕೆ ತರುವ ನಿರೀಕ್ಷೆ ಇದೆ.

ಮಂಗಳವಾರ ಎರಡನೇ ಬಾರಿ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ಬಳಿಕ ತನಿಖಾಧಿಕಾರಿಗಳು ಪಾರ್ಥಿವ ಶರೀರವನ್ನು ಹಸ್ತಾಂತರಿಸಿದರು.

ಭಾರತಕ್ಕೆ ಶವವನ್ನು ಕೊಂಡೊಯ್ಯುವುದಕ್ಕಾಗಿ ಬಿಡ್ವೆ ಕುಟುಂಬದ ಸದಸ್ಯರು ಲಂಡನ್‌ಗೆ ಬರಲಿದ್ದಾರೆ ಎನ್ನಲಾಗಿದೆ.

ಶುಲ್ಕ ಮರುಪಾವತಿಗೆ ವಿವಿ ಒಪ್ಪಿಗೆ:  ಮೈಕ್ರೊ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಬಿಡ್ವೆ ಪಾವತಿಸಿದ್ದ ಶುಲ್ಕವನ್ನು ಹಿಂದಿರುಗಿಸುವುದಾಗಿ ಲ್ಯಾಂಕೆಸ್ಟರ್ ವಿಶ್ವವಿದ್ಯಾಲಯವು  ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿ ಆರ್. ಆರ್. ಸ್ವೇನ್ ಅವರಿಗೆ ತಿಳಿಸಿದೆ.
ಬಿಡ್ವೆ ಪೋಷಕರು ಪುತ್ರನನ್ನು ವಿದೇಶದಲ್ಲಿ ಓದಿಸುವುದಕ್ಕಾಗಿ ಪುಣೆಯಲ್ಲಿರುವ ತಮ್ಮ ಮನೆಯನ್ನು ಒತ್ತೆ ಇಟ್ಟು ಬ್ಯಾಂಕ್ ಸಾಲ ಮಾಡಿದ್ದರು ಎಂದು ಹೇಳಲಾಗಿದೆ.

ಮತ್ತೊಬ್ಬ ಏಷ್ಯಾ ಪ್ರಜೆ ಮೇಲೆ ಹಲ್ಲೆ: ಭಾರತೀಯ ವಿದ್ಯಾರ್ಥಿ ಅನುಜ್ ಬಿಡ್ವೆ ಹತ್ಯೆ ನಡೆದ ಕೆಲವೇ ದಿನಗಳ ಬಳಿಕ  ಸಾಲ್‌ಫೋರ್ಡ್ ನಗರದಲ್ಲಿ ದುಷ್ಕರ್ಮಿಗಳ ಗುಂಪು ಏಷ್ಯಾ ಯುವಕನ ಮೇಲೆ ಜನಾಂಗೀಯ ನಿಂದನೆ ಮಾಡಿ ಹಲ್ಲೆನಡೆಸಿದ್ದಾರೆ.

ದುಷ್ಕರ್ಮಿಗಳ ತಂಡವೊಂದು ಸಾಲ್‌ಫೋರ್ಡ್‌ನಲ್ಲಿ ಮಂಗಳವಾರ ದರೋಡೆ ನಡೆಸಲು ಯತ್ನಿಸಿದ ಸಂದರ್ಭದಲ್ಲಿ 24 ವರ್ಷದ ಏಷ್ಯಾ ಮೂಲದ ಯುವಕನ ಮೇಲೆ ಹಲ್ಲೆ ನಡೆಸಿದೆ ಎಂದು ಮ್ಯಾಂಚೆಸ್ಟರ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಲ್ಲೆಗೊಳಗಾದ ಯುವಕನ ಗುರುತನ್ನು ಬಹಿರಂಗ ಪಡಿಸಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.