ADVERTISEMENT

ಅಮೆರಿಕ ಎಚ್ಚರಿಕೆ ಕಡೆಗಣಿಸಿದ ಉತ್ತರ ಕೊರಿಯಾ:ಉಪಗ್ರಹ ಉಡಾವಣೆಗೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST

ಪ್ಯೋಂಗ್‌ಯಾಂಗ್/ ವಾಷಿಂಗ್ಟನ್ (ಎಪಿ/ಪಿಟಿಐ): ಅಂತರ ರಾಷ್ಟ್ರೀಯ ಸಮುದಾಯದ ಎಚ್ಚರಿಕೆಯ ಹೊರತಾಗಿಯೂ, ಉತ್ತರ ಕೊರಿಯಾದ ಬಹು ನಿರೀಕ್ಷಿತ ಮತ್ತು ಮಹತ್ವಾಕಾಂಕ್ಷೆಯ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕ, ಕೊರಿಯಾದ ಪ್ರತಿ ನಡೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ.

ಸಾಂಪ್ರದಾಯಿಕ ಎದುರಾಳಿ ದಕ್ಷಿಣ ಕೊರಿಯಾ ಸೇರಿದಂತೆ ಅಂತರ ರಾಷ್ಟ್ರೀಯ ಸಮುದಾಯವನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿರುವ ಉತ್ತರ ಕೊರಿಯಾ, ಪೂರ್ವ ನಿಗದಿಯಂತೆ ಗುರುವಾರದಿಂದ ಸೋಮವಾರದ ಒಳಗಾಗಿ ರಾಕೆಟ್ ಉಡಾವಣೆಗೆ ಸಕಲ ಸಿದ್ಧತೆ ನಡೆಸಿದೆ. ಆದರೆ, ನಿಖರ ಸಮಯವನ್ನು ಇನ್ನೂ ನಿಗದಿ ಮಾಡಿಲ್ಲ.

ಈಗಾಗಲೇ ರಾಕೆಟ್‌ಗೆ ಇಂಧನ ತುಂಬಿಸಲಾಗಿದ್ದು ಗುರುವಾರ ಉಪಗ್ರಹವನ್ನು ಸ್ಥಳಕ್ಕೆ ತರಲಾಗಿದೆ. ಯುದ್ಧ ವಿಮಾನಗಳು ಪ್ಯೋಂಗ್‌ಯಾಂಗ್ ದ್ವೀಪದ ಉಡಾವಣಾ ನೆಲೆಯ ಮೇಲೆ ಹಾರಾಟ ನಡೆಸಿ ಪರಿಸ್ಥಿತಿಯ ಅವಲೋಕನ ನಡೆಸಿವೆ. ನೂತನ ಅಧ್ಯಕ್ಷ ಕಿಮ್ ಜಾಂಗ್ ಉನ್, ಆಡಳಿತಾರೂಢ ವರ್ಕರ್ಸ್‌ ಪಾರ್ಟಿ ಆಫ್ ಕೊರಿಯಾದ ಸಮಾವೇಶದಲ್ಲಿ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳು ಉತ್ತರ ಕೊರಿಯಾ ಅಂತರ ರಾಷ್ಟ್ರೀಯ ಸಮುದಾಯದ ಎಚ್ಚರಿಕೆಯನ್ನು ಉಲ್ಲಂಘಿಸಲಿದೆಯೇ ಎಂದು ಎದುರು ನೋಡುತ್ತಿದ್ದು ತಕ್ಕ ಉತ್ತರ ನೀಡಲು ಸಜ್ಜಾಗಿವೆ. ಉತ್ತರ ಕೊರಿಯಾದ ಪರಮಾಣು ಅಸ್ತ್ರ ಮತ್ತು ಯುದ್ಧ ಶಸ್ತ್ರಾಸ್ತ್ರಗಳ ಯೋಜನೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಬಂಧ ಹೇರಿದೆ. ಈಗ ನಡೆಯುತ್ತಿರುವ `ಗುರಿ ನಿರ್ದೇಶಿತ ಕ್ಷಿಪಣಿ~ ಪರೀಕ್ಷಾರ್ಥ ಉಡಾವಣೆಯಿಂದ ಭದ್ರತಾ ಮಂಡಳಿ ನಿರ್ಣಯದ ಉಲ್ಲಂಘನೆಯಾಗುತ್ತದೆ ಎಂದು ಅಮೆರಿಕ, ಬ್ರಿಟನ್, ಜಪಾನ್ ಮತ್ತು ಮಿತ್ರ ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿವೆ.

ಉನ್ಹಾ-3 ಹೆಸರಿನ ರಾಕೆಟ್ ಭಾರಿ ಸಾಮರ್ಥ್ಯದ ಪರಮಾಣು ಸಿಡಿತಲೆಗಳನ್ನು ಹೊಂದಿದೆ ಎಂಬುದು ತಜ್ಞರ ಅಭಿಪ್ರಾಯ. ಈ ಯೋಜನೆ ಕುರಿತು ಪ್ರತಿಕ್ರಿಯಿಸಿರುವ ಶ್ವೇತಭವನ, ಕೊರಿಯಾದ ಈ ನಡೆ ಅಸಹಜವಾದುದಲ್ಲ ಎಂದಿದೆ. ಒಂದು ವೇಳೆ ಗುರಿ ನಿರ್ದೇಶಿತ ಕ್ಷಿಪಣಿ ಉಡಾವಣೆಯಾದಲ್ಲಿ ಅಮೆರಿಕ ಇದಕ್ಕೆ ತಕ್ಕ ಉತ್ತರ ನೀಡಲಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೇ ಕಾರ್ನಿ ಪ್ರತಿಕ್ರಿಯಿಸಿದ್ದಾರೆ.

`ಪರಿಸ್ಥಿತಿ ಇನ್ನೂ ಕೈಮೀರಿಲ್ಲ. ಕೊನೇ ಗಳಿಗೆಯಲ್ಲಿ ನಿರ್ಧಾರ ಬದಲಿಸುವ ಅವಕಾಶವಿದ್ದು, ಈ ದಿಸೆಯಲ್ಲಿ ಉತ್ತರ ಕೊರಿಯಾ ಯೋಚಿಸಬೇಕು. ಅದನ್ನು ಮೀರಿ ಅದು ಕ್ಷಿಪಣಿ ಉಡಾವಣೆಗೆ ಮುಂದಾದರೆ ತಕ್ಕ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ~ ಎಂದು ಕಾರ್ನಿ ಕಿವಿಮಾತು ಹೇಳಿದ್ದಾರೆ.

ಜಪಾನ್ ಆಕ್ಷೇಪ: ಜಪಾನ್ ಸಂಸತ್ ಕೂಡಾ ಉತ್ತರ ಕೊರಿಯಾದ ಈ ನಿರ್ಧಾರದ ವಿರುದ್ಧ ನಿರ್ಣಯ ಅಂಗೀಕರಿಸಿದೆ. ಈಶಾನ್ಯ ಏಷ್ಯಾದ ಪ್ರಾದೇಶಿಕ ಸ್ಥಿರತೆ ಮತ್ತು ಶಾಂತಿಗೆ ಈ ಪ್ರಯೋಗ ಭಂಗ ತರಲಿದೆ ಎಂದು ನಿರ್ಣಯ ಹೇಳಿದೆ. ಉಪಗ್ರಹ ವಾಹಕ ರಾಕೆಟ್ ಆಗಿರಲಿ ಅಥವಾ ದೂರ ನಿರ್ದೇಶಿತ ಕ್ಷಿಪಣಿಯೇ ಆಗಿರಲಿ ಅದಕ್ಕೆ ಅವಕಾಶ ನೀಡದಂತೆ ನಿರ್ಣಯ ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.