ADVERTISEMENT

ಅಮೆರಿಕ: ಭಾರತೀಯ ಮೇಯರ್

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 19:30 IST
Last Updated 17 ಜನವರಿ 2012, 19:30 IST

ವಾಷಿಂಗ್ಟನ್ (ಪಿಟಿಐ): ವರ್ಜೀನಿಯಾದ ಐತಿಹಾಸಿಕ ನಗರ ಚಾರ್ಲೊಟ್ಸ್‌ವಿಲ್ಲೆಯ ಮೇಯರ್ ಆಗಿ ಭಾರತೀಯ ಮೂಲದ ಸತ್ಯೇಂದ್ರ ಸಿಂಗ್ ಹೂಜಾ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಅವರು ಮೂಲತಃ ಉತ್ತರಾಖಂಡದ ನೈನಿತಾಲ್‌ನವರು. ವಾಷಿಂಗ್ಟನ್‌ನಿಂದ ಸುಮಾರು 120 ಮೈಲಿ ದೂರದಲ್ಲಿರುವ ಚಾರ್ಲೊಟ್ಸ್‌ವಿಲ್ಲೆಯಲ್ಲಿ ನೆಲೆಸಿರುವ 43 ಸಾವಿರ ಜನಸಂಖ್ಯೆಯಲ್ಲಿ ಹೂಜಾ, ಸಿಖ್ ಸಮುದಾಯದ ಏಕೈಕ ನಿವಾಸಿಯಾಗಿದ್ದಾರೆ. ವಿಶೇಷವೆಂದರೆ ಈ ನಗರ ಅಮೆರಿಕದ ಮಾಜಿ ಅಧ್ಯಕ್ಷರಾದ ಥಾಮಸ್ ಜೆಫರ್‌ಸನ್, ಜೇಮ್ಸ ಮ್ಯಾಡಿಸನ್ ಹಾಗೂ ಜೇಮ್ಸ ಮನ್ರೊ ಅವರ ತವರು ನೆಲ ಆಗಿದೆ.

`ನಾನು ಈ ಹುದ್ದೆಗೆ ಏರಿರುವುದು ನಮ್ಮ ಜನಾಂಗಕ್ಕೆ ಅತ್ಯಂತ ಹೆಮ್ಮೆಯ ವಿಷಯ. ಮೇಯರ್ ಆಗಿ ನಗರದ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವೆನು. ದಿನದ 24 ಗಂಟೆಗಳ ಕಾಲ ಜನರ ಆಸೆ ಆಕಾಂಕ್ಷೆ, ವ್ಯವಹಾರಗಳ ಬಗ್ಗೆ ಕಾಳಜಿ ವಹಿಸುವುದಲ್ಲದೆ, ಅವರ ರಕ್ಷಣೆ ಹಾಗೂ ಹಿತಾಸಕ್ತಿಗಳಿಗೆ ಪೂರಕವಾಗಿ ದುಡಿಯುತ್ತೇನೆ~ ಎಂದು ಹೂಜಾ ಹೇಳಿದ್ದಾರೆ.

1960ರಲ್ಲಿ ಅಮೆರಿಕಕ್ಕೆ ಬಂದ ಅವರು, 38 ವರ್ಷಗಳಿಂದ ಚಾರ್ಲೊಟ್ಸ್‌ವಿಲ್ಲೆ ನಗರದಲ್ಲಿ ನೆಲೆಸಿದ್ದಾರೆ. 2007ರಲ್ಲಿ ಇಲ್ಲಿನ ನಗರಸಭೆಯ ಸದಸ್ಯರಾಗಿ ಅವರು ಆಯ್ಕೆಯಾಗಿದ್ದರು. ನಗರ ಯೋಜನೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಹೂಜಾ, ವರ್ಜೀನಿಯಾ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.