ADVERTISEMENT

ಆರ್ಥಿಕ, ಸಾಮಾಜಿಕ ಸಮಸ್ಯೆಗಳ ಕುರಿತ ವಿಶ್ವಸಂಸ್ಥೆಯ ಅಂಗ ಸಂಸ್ಥೆಗೆ ಭಾರತ ಆಯ್ಕೆ: ಪಾಕಿಸ್ತಾನ ವಿಫಲ

ಏಜೆನ್ಸೀಸ್
Published 16 ಜೂನ್ 2017, 11:23 IST
Last Updated 16 ಜೂನ್ 2017, 11:23 IST
ವಿಶ್ವಸಂಸ್ಥೆಯ ಸಭೆಯ ವೇಳೆ ಮಾತನಾಡುತ್ತಿರುವ ಭಾರತದ ಖಾಯಂ ಪ್ರತಿನಿಧಿ  ಸಯ್ಯದ್‌ ಅಕ್ಬರುದ್ದೀನ್‌.  –ಟ್ವಿಟರ್‌ ಚಿತ್ರ
ವಿಶ್ವಸಂಸ್ಥೆಯ ಸಭೆಯ ವೇಳೆ ಮಾತನಾಡುತ್ತಿರುವ ಭಾರತದ ಖಾಯಂ ಪ್ರತಿನಿಧಿ ಸಯ್ಯದ್‌ ಅಕ್ಬರುದ್ದೀನ್‌. –ಟ್ವಿಟರ್‌ ಚಿತ್ರ   

ವಿಶ್ವಸಂಸ್ಥೆ: ಸಾಮಾಜಿಕ, ಆರ್ಥಿಕ ಹಾಗೂ ಪರಿಸರ ಸಮಸ್ಯೆಗಳ ಕುರಿತಂತೆ ಸುಸ್ಥಿರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಲಿರುವ ವಿಶ್ವಸಂಸ್ಥೆಯ ಸಾಮಾಜಿಕ ಹಾಗೂ ಆರ್ಥಿಕ ಮಂಡಳಿಗೆ ಭಾರತ ಮತ್ತೆ ಆಯ್ಕೆಯಾಗಿದೆ.

ಮಂಡಳಿಯಲ್ಲಿ ಒಟ್ಟು 36 ರಾಷ್ಟ್ರಗಳು ಕಾರ್ಯನಿರ್ವಹಿಸಲಿದ್ದು, ಅಗತ್ಯವಿದ್ದ 18 ಸ್ಥಾನಗಳಿಗೆ ಸದಸ್ಯ ರಾಷ್ಟ್ರಗಳನ್ನು ಆಯ್ಕೆ ಮಾಡುವ ಸಲುವಾಗಿ ಚುನಾವಣೆ ನಡೆಸಲಾಗಿತ್ತು. ಭಾರತ ಸೇರಿದಂತೆ ಒಟ್ಟು 18 ರಾಷ್ಟ್ರಗಳು ಈ ಬಾರಿ ಸಾಮಾಜಿಕ ಹಾಗೂ ಆರ್ಥಿಕ ಮಂಡಳಿಗೆ ಆಯ್ಕೆಯಾಗಿವೆ.

ಚಲಾಯಿಸಲಾದ ಒಟ್ಟು 188 ಮತಗಳ ಪೈಕಿ 183 ಮತಗಳನ್ನು ಭಾರತ ಪಡೆದುಕೊಂಡಿದೆ. ಜಪಾನ್‌ 185ಮತಗಳನ್ನು ಪಡೆದಿದೆ.

ADVERTISEMENT

ಭಾರತ ಈಗಾಗಲೇ ಮಂಡಳಿಯ ಸದಸ್ಯತ್ವವನ್ನು ಹೊಂದಿದೆಯಾದರೂ 2018ರ ಜನವರಿಯಲ್ಲಿ ಸದಸ್ಯತ್ವದ ಅವಧಿ ಮುಕ್ತಾಯವಾಗಲಿದೆ. ಹಾಗಾಗಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿತ್ತು.

ಈ ಕುರಿತು ಟ್ವೀಟರ್‌ ಮೂಲಕ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯನ್ನು ಪ್ರತಿನಿಧಿಸುವ ಭಾರತದ ಖಾಯಂ ಪ್ರತಿನಿಧಿ ಸಯ್ಯದ್‌ ಅಕ್ಬರುದ್ದೀನ್‌ ಅವರು, ‘ಮತ್ತೊಂದು ದಿನ, ಮತ್ತೊಂದು ಚುನಾವಣೆ, ಭಾರತ ಮತ್ತೆ ಗೆದ್ದಿದೆ. ಬೆಂಬಲ ನೀಡಿದ ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ಧನ್ಯವಾದಗಳು. ಭಾರತ ಮತ್ತೆ ಸಾಮಾಜಿಕ ಆರ್ಥಿಕ ಮಂಡಳಿಗೆ ಆಯ್ಕೆಯಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.