ADVERTISEMENT

ಆಹಾರದಲ್ಲಿ ವಿಕಿರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 19:30 IST
Last Updated 19 ಮಾರ್ಚ್ 2011, 19:30 IST

 ಒಸಕಾ/ ವಿಯೆನ್ನಾ (ಎಎಫ್‌ಪಿ): ಫುಕುಶಿಮಾದಲ್ಲಿ ಅಣುಸ್ಥಾವರದ ರಿಯಾಕ್ಟರುಗಳ ಸ್ಫೋಟದಿಂದ ಹೊರಸೂಸಿರುವ ವಿಕಿರಣಗಳು ಆಹಾರ ಪದಾರ್ಥ ಸೇರಿರುವ ಆತಂಕದ ನಡುವೆಯೇ ಶನಿವಾರ ಅಣುಶಕ್ತಿ ಸ್ಥಾವರ ಮತ್ತು ವಿದ್ಯುತ್ ಪೂರೈಕೆ ಘಟಕಗಳ ನಡುವಣ ಸಂಪರ್ಕವನ್ನು ಮರು ಸ್ಥಾಪಿಸುವಲ್ಲಿ ಎಂಜಿನಿಯರುಗಳು ಯಶಸ್ವಿಯಾಗಿದ್ದಾರೆ.

ಹಾಲು ಮತ್ತು ತರಕಾರಿಗಳಲ್ಲಿ ವಿವಿಧ ಮಟ್ಟದ ವಿಕಿರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಲುಷಿತವಾದ ಆಹಾರೋತ್ಪನ್ನಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (ಐಎಇಎ) ಸಲಹೆ ನೀಡಿದೆ.

 ಫುಕುಶಿಮಾದ ಬಳಿ ಆಹಾರ ಪದಾರ್ಥಗಳಲ್ಲಿ ವಿಕಿರಣಕಾರಕ ಅಯೋಡಿನ್ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದನ್ನು ಜಪಾನಿನ ಆರೋಗ್ಯ ಸಚಿವಾಲಯ ದೃಢಪಡಿಸಿದೆ ಎಂದು ಐಎಇಎ ಹೇಳಿಕೆಯಲ್ಲಿ ತಿಳಿಸಿದೆ.

 ‘ವಿಕಿರಣಕಾರಕ ಅಯೋಡಿನ್ ಎಂಟು ದಿನಗಳವರೆಗೆ ಮಾತ್ರ ಸಕ್ರಿಯವಾಗಿದ್ದು ನಂತರ ಸ್ವಾಭಾವಿಕವಾಗಿಯೇ ನಶಿಸಿದರೂ ಇಂತಹ ಆಹಾರ ಸೇವಿಸಿದ ವ್ಯಕ್ತಿಗಳ ಆರೋಗ್ಯಕ್ಕೆ ಇದು ಕೆಲ ಮಟ್ಟಿಗೆ ಅಪಾಯಕಾರಿಯೇ. ಇದು ಥೈರಾಯಿಡ್‌ಗೆ ಹಾನಿ ಉಂಟು ಮಾಡುತ್ತದೆ’ ಎಂದು ಅದು   ಎಚ್ಚರಿಸಿದೆ.

ಅಣುಸ್ಥಾವರದ 1, 2, 5ಮತ್ತು6ನೇ ರಿಯಾಕ್ಟರುಗಳಿಗೆ ಶನಿವಾರ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು 3 ಮತ್ತು ನಾಲ್ಕನೇ ರಿಯಾಕ್ಟರುಗಳಿಗೆ ಭಾನುವಾರ ಸಂಪರ್ಕ ಕಲ್ಪಿಸಲಾಗುವುದು ಎಂದು ಎಂಜಿನಿಯರುಗಳು    ತಿಳಿಸಿದ್ದಾರೆ.

ಈ ನಡುವೆ ಕ್ಯಾಲಿಫೋರ್ನಿಯಾದ ಸಾಕ್ರಾಮೆಂಟೋನಲ್ಲಿರುವ ವಿಕಿರಣ ಪತ್ತೆ ಕೇಂದ್ರದಲ್ಲಿ ಅಲ್ಪ ಪ್ರಮಾಣದ ವಿಕಿರಣ ದಾಖಲಾಗಿದ್ದು ಜಪಾನ್‌ನ ಅಣುಶಕ್ತಿ ಸ್ಥಾವರಗಳಿಂದ ಸೋರಿಕೆಯಾದ ವಿಕಿರಣಗಳು ಪೆಸಿಫಿಕ್ ಸಾಗರದ ಮೂಲಕ ಅಮೆರಿಕದ ಕ್ಯಾಲಿಫೋರ್ನಿಯಾ ತಲುಪಿರುವುದನ್ನು ದೃಢಪಡಿಸಿವೆ. ಆದರೆ ಇದರಿಂದ ಯಾವುದೇ ದುಷ್ಪರಿಣಾಮ ಇಲ್ಲ ಎಂದು ಶಕ್ತಿ ಮತ್ತು ಪರಿಸರ ಸಂರಕ್ಷಣಾ ಸಂಸ್ಥೆ ಹೇಳಿದೆ.

ನಿರಂತರವಾಗಿ ನೀರು ಸುರಿದು ಹೆಚ್ಚುತ್ತಿದ್ದ ಸ್ಥಾವರಗಳ ತಾಪಮಾನವನ್ನು ತಗ್ಗಿಸಲಾಗಿದೆ. ಸದ್ಯ ತಾಪಮಾನವನ್ನು ಶಮನಗೊಳಿಸಲಾಗಿದ್ದು ನಿಯಂತ್ರಣದಲ್ಲಿದೆ. ನೂರು ಡಿಗ್ರಿ ಸೆಂಟಿಗ್ರೇಡ್ ಅಥವಾ ಅದಕ್ಕೂ ಕಡಿಮೆ ತಾಪಮಾನವಿದ್ದು ಅದು ಸ್ಥಿರವಾಗಿದೆ. ಶೀತಲೀಕರಣ ವ್ಯವಸ್ಥೆ ಸಮರ್ಪಕವಾಗಿ ಕಾರ್ಯಾರಂಭಿಸಿದ ನಂತರ ಪರಿಸ್ಥಿತಿ ಸಂಪೂರ್ಣವಾಗಿ ಹತೋಟಿಗೆ ಸಿಗಲಿದೆ ಎಂದು ಜಪಾನ್ ರಕ್ಷಣಾ ಸಚಿವ ತೊಶಿಮಿ ಕಿಟಾಝಾವಾ ಹೇಳಿದ್ದಾರೆ.

ಸುನಾಮಿ ಸಾಧ್ಯತೆ ಇಲ್ಲ: ಟೋಕಿಯೊ ಮತ್ತು ಫುಕುಶಿಮಾದ ದಕ್ಷಿಣಕ್ಕಿರುವ ಇಬರಾಕಿಗಳಲ್ಲಿ ಶನಿವಾರ ಭೂಕಂಪನದ ಅನುಭವವಾಗಿದ್ದು, ತೀವ್ರತೆ 6.1ರಷ್ಟಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಮತ್ತೆ ಸುನಾಮಿ ಅಪ್ಪಳಿಸುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ.

ಮುಂದುವರಿದ ಯತ್ನ: ಶೀತಲೀಕರಣ ವ್ಯವಸ್ಥೆ ಹಾಳಾಗಿ ಹೆಚ್ಚಿದ ತಾಪಮಾನವನ್ನು ತಗ್ಗಿಸಲು  ಭೂಕಂಪ ಪೀಡಿತ ಫುಕುಶಿಮಾ ಅಣುಸ್ಥಾವರಗಳಲ್ಲಿ ಸಾವಿರಾರು ಟನ್ ನೀರು ಸುರಿಯಲಾಗುತ್ತಿದೆ.
  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.