ADVERTISEMENT

ಇಂಡೊನೇಷ್ಯಾದಲ್ಲಿ ಭಾರಿ ಭೂಕಂಪನ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 19:30 IST
Last Updated 11 ಏಪ್ರಿಲ್ 2012, 19:30 IST

ಬಂದಾ ಏಸೇ/ ಬ್ಯಾಂಕಾಕ್ (ಪಿಟಿಐ/ಎಪಿ): ಎಂಟು ವರ್ಷಗಳ ಹಿಂದೆ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡ ಭೀಕರ ಸುನಾಮಿಯ ಕರಾಳ ನೆನಪು ಇನ್ನೂ ಹಸಿಯಾಗಿರುವಾಗಲೇ ಮತ್ತೊಮ್ಮೆ ವಸುಂಧರೆ ಸಹನೆ ಕಳೆದುಕೊಂಡಿದ್ದಾಳೆ.
 
ಬುಧವಾರ ಇಂಡೊನೇಷ್ಯಾದಲ್ಲಿ ರಿಕ್ಟರ್ ಮಾಪಕದಲ್ಲಿ 8.5 ಹಾಗೂ 8.2ರಷ್ಟು ತೀವ್ರತೆಯ ಎರಡು ಪ್ರಬಲ ಭೂಕಂಪನಗಳು ಸಂಭವಿಸಿದ ಹಿನ್ನೆಲೆಯಲ್ಲಿ, ಭಾರತ ಸೇರಿ 28 ರಾಷ್ಟ್ರಗಳಲ್ಲಿ ಸುನಾಮಿ ಎಚ್ಚರಿಕೆ ನೀಡಿ, ಸಂಜೆಯ ವೇಳೆಗೆ ವಾಪಸ್ ಪಡೆಯಲಾಯಿತು. ಸಾವು, ನೋವಿನ ವರದಿಯಾಗಿಲ್ಲ.

 
 

ಭಾರತದ ದಕ್ಷಿಣ ಹಾಗೂ ಪೂರ್ವ ಭಾಗ, ಶ್ರೀಲಂಕಾ, ಆಸ್ಟ್ರೇಲಿಯಾ, ಥಾಯ್ಲೆಂಡ್, ಸಿಂಗಪುರ, ಮಲೇಷ್ಯಾ ಮತ್ತಿತರ ಪ್ರದೇಶಗಳಲ್ಲಿ ಭೂಮಿ ನಡುಗಿದ ಅನುಭವವಾಗಿದ್ದು, ನಗರ ಪ್ರದೇಶಗಳಲ್ಲಿ ಜನರು ಬಹುಮಹಡಿ ಕಟ್ಟಡಗಳಿಂದ ಭಯಭೀತರಾಗಿ ಹೊರಗೆ ಬಂದರು. ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎಲ್ಲೆಡೆ ಸಂಚಾರ ದಟ್ಟಣೆ ಕಂಡುಬಂತು.

`ಇಂಡೊನೇಷ್ಯಾದ ಉತ್ತರ ಸುಮಾತ್ರಾದ ಪಶ್ಚಿಮ ಕರಾವಳಿಯಲ್ಲಿ ಅಂತರ ರಾಷ್ಟ್ರೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2 ಗಂಟೆ 8 ನಿಮಿಷದ ಹೊತ್ತಿಗೆ ಪ್ರಬಲ ಕಂಪನ, ಬಳಿಕ ಎರಡು ಮರು ಕಂಪನಗಳು ಸಂಭವಿಸಿವೆ. ಬಾಂದಾ ಏಸೇ ನಗರದಿಂದ 431 ಕಿ.ಮೀ ದೂರದಲ್ಲಿ, 33 ಕಿ.ಮೀ ಸಾಗರದ ಆಳದಲ್ಲಿ ಅದರ ಕೇಂದ್ರ ಬಿಂದು ಇತ್ತು~ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ. ಬಾಂದಾ ಏಸೇಯಲ್ಲಿ ಸುಮಾರು ಐದು ನಿಮಿಷಗಳ ಕಾಲ ಭೂಮಿ ಕಂಪಿಸಿತು. ದೂರವಾಣಿ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು.

ಥಾಯ್ಲೆಂಡ್‌ನ ಫುಕೆಟ್ ದ್ವೀಪದಲ್ಲಿನ ರೆಸಾರ್ಟ್‌ನಲ್ಲಿಯೂ ಕಂಪನವು ಅನುಭವಕ್ಕೆ ಬಂತು. ಇಲ್ಲಿನ ಹೋಟೆಲ್‌ಗಳಲ್ಲಿ ತಂಗಿದ್ದ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಯಿತು.

`ಜನರು ಈಜು ಕೊಳದಿಂದ ಭಯಭೀತರಾಗಿ ಹೊರಗೆ ಓಡಿ ಬಂದರು. ಕಂಪನದಿಂದಾಗಿ ಈಜು ಕೊಳದ ನೀರು ರಭಸವಾಗಿ ಅಪ್ಪಳಿಸುತ್ತಿದ್ದುದು ಕಂಡುಬಂತು~ ಎಂದು ತಮ್ಮ ಕುಟುಂಬದೊಂದಿಗೆ ಫುಕೆಟ್‌ಗೆ ತೆರಳಿರುವ ಸವಿತಾ ಶ್ರೀರಾಂ ಅವರು ಸುದ್ದಿ ಸಂಸ್ಥೆಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಿದ್ದಾರೆ.

ಭಾರತೀಯರಿಗೆ ಎಚ್ಚರಿಕೆ: ಇಂಡೊನೇಷ್ಯಾ ಭೂಕಂಪನದ ಹಿನ್ನೆಲೆಯಲ್ಲಿ, ಫುಕೆಟ್‌ನಲ್ಲಿರುವ ಭಾರತೀಯರಿಗೆ ಎಚ್ಚರದಿಂದ ಇರುವಂತೆ ಭಾರತೀಯ ಹೈಕಮಿಷನ್ ಸೂಚನೆ ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೊಲಂಬೊದಲ್ಲಿ ಕೆಲವು ಗಗನಚುಂಬಿ ಕಟ್ಟಡಗಳಿಂದ ಜನರನ್ನು ತೆರವುಗೊಳಿಸಲಾಯಿತು.

ಬೆಂಗಳೂರು, ಚೆನ್ನೈ, ಕೋಲ್ಕತ್ತಗಳಲ್ಲಿ ನಡುಗಿದ ಭೂಮಿ( ನವದೆಹಲಿ ವರದಿ): ಸುಮಾತ್ರದಲ್ಲಿ ಭೂಕಂಪನ ಸಂಭವಿಸಿದ ಸಮಯದಲ್ಲಿ ಪೂರ್ವ ಕರಾವಳಿಯ ರಾಜ್ಯಗಳು ಹಾಗೂ ಬೆಂಗಳೂರು, ಚೆನ್ನೈ, ಕೋಲ್ಕತ್ತ, ಭುವನೇಶ್ವರ ಸೇರಿದಂತೆ ಪೂರ್ವ ಭಾರತದ ಪ್ರಮುಖ ನಗರಗಳಲ್ಲಿ ಕಂಪನದ ಅನುಭವವಾಯಿತು. ಆದರೆ, ಎಲ್ಲಿಯೂ ಆಸ್ತಿಪಾಸ್ತಿ, ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಪೂರ್ವ ಕರಾವಳಿಗೆ ಸುನಾಮಿ ಎಚ್ಚರಿಕೆ: ಭೂಕಂಪನದ ಹಿನ್ನೆಲೆಯಲ್ಲಿ ಕೇಂದ್ರ ಭೂವಿಜ್ಞಾನ ಸಚಿವಾಲಯ ಅಂಡಮಾನ್, ನಿಕೋಬಾರ್ ದ್ವೀಪಸಮೂಹ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕರಾವಳಿಯ ಜನರಿಗೆ ಸುನಾಮಿ ಮುನ್ನೆಚ್ಚರಿಕೆ ನೀಡಿತ್ತು. ಆದರೆ, ಸಂಜೆ ಆರು ಗಂಟೆಯ ಹೊತ್ತಿಗೆ ಈ ಭಯ ನಿವಾರಣೆಯಾಗಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಕರಾವಳಿ ತೀರದ ಜನರಿಗೆ ಭಯಭೀತರಾಗದಂತೆ ಮನವಿ ಮಾಡಿಕೊಂಡಿತು.

ಭೂಕಂಪನದಿಂದ ಎದ್ದ ಅಲೆಗಳು ತಮಿಳುನಾಡು ಕರಾವಳಿ, ಆಂಧ್ರಪ್ರದೇಶ ಹಾಗೂ ಅಂಡಮಾನ್ ದ್ವೀಪಗಳಿಗೆ ಸಂಜೆ 4.33ಕ್ಕೆ ತಲುಪುವ ಸಾಧ್ಯತೆಯಿದೆ ಎಂದೂ ಭಾರತೀಯ ಸುನಾಮಿ ಮನ್ಸೂಚನಾ ಕೇಂದ್ರ ಹೇಳಿತ್ತು. 

ಸೇನಾಪಡೆಯ ಅಂಡಮಾನ್- ನಿಕೋಬಾರ್ ಕಮಾಂಡ್‌ಗಳಿಗೂ ಸುನಾಮಿ ಸಾಧ್ಯತೆಯ ಸಂದೇಶ ನೀಡಲಾಗಿತ್ತು. ಅಹಿತಕರ ಘಟನೆಗಳು ನಡೆದಲ್ಲಿ ಪರಿಹಾರ ಕಾರ್ಯಾಚರಣೆ ನಡೆಸಲು ಭಾರತೀಯ ವಾಯುಪಡೆ ಮತ್ತು ನೌಕಾಪಡೆಗಳು ಯುದ್ಧವಿಮಾನ ಹಾಗೂ ಹಡಗುಗಳನ್ನು ಸನ್ನದ್ಧವಾಗಿಟ್ಟಿದ್ದವು.

ಆರಂಭದಲ್ಲಿ ಸುನಾಮಿ ಭಯ ಕಾಡಿತ್ತು. ಆದರೆ, ಅಂಡಮಾನ್, ನಿಕೋಬಾರ್‌ಗಳಲ್ಲಿ ಸಂಜೆಯವರೆಗೂ ದೈತ್ಯ ಅಲೆಗಳು ಕಾಣಲಿಲ್ಲ. ಕಂಪನದಿಂದ ಭೂಫಲಕ ಅಡ್ಡವಾಗಿ ಚಲಿಸಿದ್ದರಿಂದ ಸುನಾಮಿ  ಏಳಲಿಲ್ಲ ಎನ್ನಲಾಗಿದೆ.


 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.