ADVERTISEMENT

ಇಂಡೊನೇಷ್ಯಾ: ರಷ್ಯ ವಿಮಾನ ಕಣ್ಮರೆ

​ಪ್ರಜಾವಾಣಿ ವಾರ್ತೆ
Published 9 ಮೇ 2012, 19:30 IST
Last Updated 9 ಮೇ 2012, 19:30 IST
ಇಂಡೊನೇಷ್ಯಾ: ರಷ್ಯ ವಿಮಾನ ಕಣ್ಮರೆ
ಇಂಡೊನೇಷ್ಯಾ: ರಷ್ಯ ವಿಮಾನ ಕಣ್ಮರೆ   

ಜಕಾರ್ತ (ಎಎಫ್‌ಪಿ): ಐವತ್ತು ಜನರನ್ನು ಹೊತ್ತೊಯ್ದ ರಷ್ಯದ ಸುಖೋಯ್ ಸೂಪರ್ ಜೆಟ್ 100 ಪ್ರಾತ್ಯಕ್ಷಿಕೆ ವಿಮಾನವೊಂದು ಜಕಾರ್ತದ ದಕ್ಷಿಣಕ್ಕಿರುವ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಬುಧವಾರ ಕಣ್ಮರೆಯಾಗಿದೆ.

`ಬೊಗೊರ್ ಪ್ರದೇಶದಿಂದ ವಿಮಾನವು ರೇಡಾರ್ ಸಂಪರ್ಕದಿಂದ ತಪ್ಪಿಸಿಕೊಂಡಿತು. ವಿಮಾನವು ಅಪಘಾತಕ್ಕೀಡಾಗಿದೆಯೇ ಇಲ್ಲವೇ ಎಂಬ ಬಗ್ಗೆ ಅನಿಶ್ಚಿತತೆ ಇದೆ~ ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ವಕ್ತಾರರು ಹೇಳಿದ್ದಾರೆ.

ವಿಮಾನವು ಸ್ಥಳೀಯ ಕಾಲಮಾನ ಮಧ್ಯಾಹ್ನ ಎರಡು ಗಂಟೆಗೆ ಜಕಾರ್ತದ ಪೂರ್ವಕ್ಕಿರುವ ಹಲೀಂ ಪೆರ್ಡಾನಕುಸುಮ ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭಿಸಿತ್ತು.  `ಬುಧವಾರ ಮಧ್ಯಾಹ್ನ 2.50ರ ಸುಮಾರಿಗೆ ವಿಮಾನವು 10,000 ಅಡಿಗಳಿಂದ  6,000 ಅಡಿಗಳಿಗೆ ಕುಸಿಯಿತು~ ಎಂದು ಸಂಸ್ಥೆ ಹೇಳಿದೆ.

ರಕ್ಷಣಾ ಕಾರ್ಯಕ್ಕೆ ಅಡ್ಡಿ
ಶೋಧ ಮತ್ತು ಪರಿಹಾರ ಕಾರ್ಯಾಚರಣೆ ತಂಡಗಳು ವಿಮಾನ ಪತ್ತೆಗಾಗಿ ತೆರಳಿವೆ. ಪ್ರತಿಕೂಲ ಹವಾಮಾನದ ಕಾರಣ ಎರಡು ಹೆಲಿಕಾಪ್ಟರ್‌ಗಳು ವಾಪಸ್ ಬಂದಿವೆ ಎಂದು ಸಾರಿಗೆ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ಸೈನಿಕರು, ಪೊಲೀಸರು ಮತ್ತು ವಾಯುಪಡೆಯ ಸದಸ್ಯರು   ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ರಷ್ಯದ  ರಾಯಭಾರಿ ಕಚೇರಿ ಪ್ರತಿನಿಧಿಗಳು,  ವಿಮಾನ ಖರೀದಿದಾರರು ಮತ್ತು ಪತ್ರಕರ್ತರು ವಿಮಾನದಲ್ಲಿದ್ದರು ಎನ್ನಲಾಗಿದೆ.



ವಿಮಾನವನ್ನು  ಉದ್ದೇಶಪೂರ್ವಕವಾಗಿಯೇ 10,000 ಅಡಿಗಳಿಂದ 6,000 ಅಡಿಗಳಿಗೆ  ಇಳಿಸಲಾಗಿತ್ತು. ಹಲೀಂ ವಾಯು ನೆಲೆಗೆ ಹಿಂತಿರುಗಲು ಪೈಲಟ್ ಯತ್ನಿಸಿದ್ದ ಎಂದು ಇಂಡೊನೇಷ್ಯಾ ಸಾರಿಗೆ ಇಲಾಖೆ  ವಕ್ತಾರರು ಹೇಳಿದ್ದಾರೆ.

ಬೊಗೊರ್ ಸೇನಾನೆಲೆಯಿಂದ 10 ನಾಟಿಕಲ್ ಮೈಲು ದೂರದಲ್ಲಿರುವ ಬೆಡ್ಡಗುಡ್ಡಗಳ ಪ್ರದೇಶದಲ್ಲಿ ವಿಮಾನ ನಾಪತ್ತೆಯಾಗಿದೆ~ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.