ADVERTISEMENT

ಇಂದು ಸುನೀತಾ ವಿಲಿಯಮ್ಸ ಧರೆಗೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2012, 19:30 IST
Last Updated 18 ನವೆಂಬರ್ 2012, 19:30 IST

ಹ್ಯೂಸ್ಟನ್ (ಪಿಟಿಐ): ಎರಡನೇ ಬಾರಿ  ಅಂತರಿಕ್ಷಕ್ಕೆ ತೆರಳಿ ಇತಿಹಾಸ ನಿರ್ಮಿಸಿರುವ ಭಾರತ ಮೂಲದ ಮಹಿಳಾ ಗಗನಯಾತ್ರಿ ಸುನೀತಾ ವಿಲಿಯಮ್ಸ ಅವರು ನಾಲ್ಕು ತಿಂಗಳ ಅಂತರಿಕ್ಷ ವಾಸದ ನಂತರ ಇಬ್ಬರು ಸಹೋದ್ಯೋಗಿಗಳೊಂದಿಗೆ ಸೋಮವಾರ ಭೂಮಿಗೆ ಹಿಂದಿರುಗಲಿದ್ದಾರೆ.

ನಾಲ್ಕು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಕಾರ್ಯನಿರ್ವಹಿಸಿದ ಬಳಿಕ ಸುನೀತಾ ವಿಲಿಯಮ್ಸ,  ಜಪಾನಿನ ಅಕಿ ಹೊಶಿದೆ ಮತ್ತು ರಷ್ಯಾದ ಯೂರಿ ಮಲೆಂಚೆಂಕೊ ಅವರು ಸ್ಥಳೀಯ ಕಾಲಮಾನ ಭಾನುವಾರ ರಾತ್ರಿ 10.26ಕ್ಕೆ (ಭಾರತೀಯ ಕಾಲ ಮಾನ ಸೋಮವಾರ ನಸುಕು 3.56)

ಐಎಸ್‌ಎಸ್‌ನಿಂದ ಪ್ರಯಾಣ ಬೆಳೆಸಲಿದ್ದು ಕಜಕ್‌ಸ್ತಾನದಲ್ಲಿ ಸ್ಥಳೀಯ ಕಾಲಮಾನ ಭಾನುವಾರ ತಡ ರಾತ್ರಿ 1.53ಕ್ಕೆ (ಭಾರತೀಯ ಕಾಲಮಾನ ಸೋಮವಾರ ಬೆಳಿಗ್ಗೆ 7.23ಕ್ಕೆ) ಧರೆಗೆ ಇಳಿಯಲಿದ್ದಾರೆ.

ಜುಲೈನಲ್ಲಿ ಅಂತರಿಕ್ಷಕ್ಕೆ ಪ್ರಯಾಣಿಸಿದ ನಂತರ ಐಎಸ್‌ಎಸ್‌ನಲ್ಲಿ ಕಮಾಂಡರ್ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಸುನೀತಾ, ಶನಿವಾರ ಅಧಿಕೃತವಾಗಿ ತಮ್ಮ  ಹುದ್ದೆಯನ್ನು ನಾಸಾದ ಸಹ ಗಗನಯಾತ್ರಿ  ಕೆವಿನ್ ಫೋರ್ಡ್ ಅವರಿಗೆ ಹಸ್ತಾಂತರಿಸಿದರು.

`ಅಂತರಿಕ್ಷವೇ ಇಷ್ಟ~

`ಇದು ಅತ್ಯಂತ ಪ್ರಶಾಂತವಾದ ಸ್ಥಳ. ಇಲ್ಲಿಂದ ಹಿಂದಿರುಗಲು ಯಾರೂ ಇಷ್ಟ ಪಡುವುದಿಲ್ಲ~
-ಭೂಮಿಗೆ ಮರಳಲು ಸಿದ್ಧವಾಗುತ್ತಿರುವಂತೆಯೇ ಸುನೀತಾ ವಿಲಿಯಮ್ಸ ಹೇಳಿದ ಮಾತಿದು.
`ನನಗೆ ಈಗಲೂ ಇಲ್ಲಿಂದ ಹೊರಡಲು ಮನಸ್ಸಿಲ್ಲ. ನಾನು ಅಂತರಿಕ್ಷವನ್ನು ಹೆಚ್ಚು ಇಷ್ಟ ಪಡುತ್ತೇನೆ. ಆದರೆ ಹೊರಡಲೇ ಬೇಕಾಗಿದೆ~ ಎಂದು ಸುನೀತಾ ಹೇಳಿದ್ದಾರೆ.

`ಇದು ನಿಜಕ್ಕೂ ಅತ್ಯಂತ ಶಾಂತವಾದ ಸ್ಥಳ~ ಎಂದು ಹೇಳುವ ಸುನೀತಾ ಅವರು, ಗಗನಯಾತ್ರಿಗಳು ಕ್ಷಿಪ್ರವಾಗಿ ಈ ವಾತಾವರಣಕ್ಕೆ ಹೊಂದಿಕೊಳ್ಳುವ ಬಗೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

 ಸೋಮವಾರ ಬೆಳಿಗ್ಗೆ ಭೂಮಿಯನ್ನು ಸ್ಪರ್ಶಿಸಲಿರುವ ಸುನೀತಾ ಅವರನ್ನು ಸ್ವಾಗತಿಸಲು ಸ್ನೇಹಿತರು, ಅವರ ಕುಟುಂಬದ ಸದಸ್ಯರು ಕಾಯುತ್ತಿದ್ದಾರೆ. ಅವರು ಅಂತರಿಕ್ಷದಿಂದ ಸುರಕ್ಷಿತವಾಗಿ  ಹಿಂದಿರುಗಲಿ ಎಂದೂ ಅವರು ಪ್ರಾರ್ಥಿಸುತ್ತಿದ್ದಾರೆ. `ಅವಳ ಭೇಟಿಗಾಗಿ ನಾವು ಕಾಯುತ್ತಿದ್ದೇವೆ~ ಎಂದು ಸುನೀತಾ ತಂದೆ ದೀಪಕ್ ಪಾಂಡ್ಯ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.