ವ್ಯಾಟಿಕನ್ ಸಿಟಿ (ಎಎಫ್‌ಪಿ): ಜಗತ್ತಿನ 120 ಕೋಟಿ ಕ್ಯಾಥೋಲಿಕರು ತೀವ್ರ ಕುತೂಹಲದಿಂದ ಎದುರು ನೋಡುತ್ತಿರುವ ನೂತನ ಪೋಪ್ ಆಯ್ಕೆ ಬುಧವಾರ ನಡೆದ ಮೂರನೇ ರಹಸ್ಯ ಸುತ್ತಿನ ಮತದಾನದ ನಂತರವೂ ಸಾಧ್ಯವಾಗಲಿಲ್ಲ. ಸಿಸ್ಟೈನ್ ಚಾಪೆಲ್ (ಪ್ರಾರ್ಥನಾಲಯ) ಚಿಮಣಿಯಿಂದ ಕಪ್ಪು ಹೊಗೆ ಹೊರಸೂಸುವ ಮೂಲಕ ಪೋಪ್ ಆಯ್ಕೆ ಸಾಧ್ಯವಾಗಿಲ್ಲ ಎಂಬ ಸಂದೇಶವನ್ನು ಮತ್ತೊಮ್ಮೆ ಬಿತ್ತರಿಸಲಾಯಿತು.
ಕಳೆದ ತಿಂಗಳು ಪದತ್ಯಾಗ ಮಾಡಿದ 85 ವರ್ಷದ ಪೋಪ್ 16ನೇ ಬೆನೆಡಿಕ್ಟ್ ಅವರ ಉತ್ತರಾಧಿಕಾರಿಯ ಆಯ್ಕೆಗೆ ಇಲ್ಲಿನ ಪೋಪ್‌ರವರ ಅಧಿಕೃತ ನಿವಾಸದಲ್ಲಿ ಮಂಗಳವಾರದಿಂದ ವಿಶ್ವದ 115 ಕಾರ್ಡಿನಲ್‌ಗಳು ಸಭೆ ಸೇರಿದ್ದಾರೆ.
ಮಂಗಳವಾರ ಮೊದಲ ಸುತ್ತಿನ ಮತದಾನ ನಡೆದಿದ್ದು, ಬುಧವಾರ ಎರಡು ಮತ್ತು ಮೂರನೇ ಸುತ್ತಿನ ಮತದಾನ ನಡೆಯಿತು. ಆದರೆ 3ನೇ 2ರಷ್ಟು ಬಹುಮತದ ಕೊರತೆಯ ಹಿನ್ನೆಲೆಯಲ್ಲಿ 266ನೇ ಪೋಪ್‌ರ ಆಯ್ಕೆ ಸಾಧ್ಯವಾಗಲಿಲ್ಲ. ಯಾವುದೇ ಕಾರ್ಡಿನಲ್ ಮೂರನೇ ಎರಡರಷ್ಟು ಬಹುಮತ ಗಳಿಸಲು ಸಫಲವಾಗಿಲ್ಲ.
ಇಟಲಿಯ ಕಾರ್ಡಿನಲ್ ಅಂಜೆಲೊ ಸ್ಕೋಲ, ಬ್ರೆಜಿಲ್‌ನ ಒಡಿಲೊ ಶೆರರ್ ಮತ್ತು ಕೆನಡಾದ ಮಾರ್ಕ್ ವ್ಯೆಲೆಟ್ ಕ್ಯಾಥೋಲಿಕರ ಪರಮೋಚ್ಚ ಧರ್ಮಗುರುವಿನ ಸ್ಥಾನ ಅಲಂಕರಿಸುವ ಸರದಿಯಲ್ಲಿದ್ದು, ಕಾರ್ಡಿನಲ್‌ಗಳ ಸಭೆಯಲ್ಲಿ ಒಮ್ಮತ ಮೂಡಲಿಲ್ಲ. ಇವರೆಲ್ಲರೂ ಬೆನೆಡಿಕ್ಟ್ ಅವರಂತೆಯೇ ಸಂಪ್ರದಾಯವಾದಿಗಳು. ಫಿಲಿಪ್ಪೀನ್ಸ್‌ನ ಪ್ರಸಿದ್ಧ ಆರ್ಚ್ ಬಿಷಪ್ ಲೂಯಿಸ್ ಆಂಟೊನಿಯೊ ಟಾಗಲ್ ಮತ್ತು ದಕ್ಷಿಣ ಆಫ್ರಿಕಾದ ವಿಲ್‌ಫ್ರೆಡ್ ನಾಪಿಯರ್ ಪರಮೋಚ್ಚ ಧರ್ಮಗುರುವಿನ ಸ್ಥಾನ ಅಲಂಕರಿಸುತ್ತಾರೆ ಎನ್ನುವ ಭರವಸೆ ಈಗ ಕ್ಷೀಣವಾಗಿದೆ.
ಭಾರತದ ಯುವ ಕಾರ್ಡಿನಲ್: ಕೇರಳದ ತಿರುವನಂತಪುರ ಆರ್ಚ್ ಬಿಷಪ್ ಕ್ಲೀಮಿಸ್ ತೊಟ್ಟುಂಕಲ್ ಅವರು ಪೋಪ್ ಆಯ್ಕೆಗೆ ಸೇರಿರುವ ಕಾರ್ಡಿನಲ್‌ಗಳಲ್ಲಿಯೇ ಅತ್ಯಂತ ಚಿಕ್ಕ ಪ್ರಾಯದವರಾಗಿದ್ದಾರೆ. 53 ವರ್ಷದ ತೊಟ್ಟುಂಕಲ್ ಅವರನ್ನು 2012ರಲ್ಲಿ ಕಾರ್ಡಿನಲ್‌ರಾಗಿ ನೇಮಕ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.