ADVERTISEMENT

ಇರಾನ್ ವಿರುದ್ಧ ದಿಗ್ಬಂಧನ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2011, 19:30 IST
Last Updated 8 ನವೆಂಬರ್ 2011, 19:30 IST
ಇರಾನ್ ವಿರುದ್ಧ ದಿಗ್ಬಂಧನ ಮುಂದುವರಿಕೆ
ಇರಾನ್ ವಿರುದ್ಧ ದಿಗ್ಬಂಧನ ಮುಂದುವರಿಕೆ   

ವಾಷಿಂಗ್ಟನ್ (ಐಎಎನ್‌ಎಸ್/ರಿಯಾ ನೊವೊಸ್ತಿ/ಪಿಟಿಐ): ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಇರಾನ್ ವಿರುದ್ಧ 1979ರಲ್ಲಿ ವಿಧಿಸಿದ್ದ ಆರ್ಥಿಕ ದಿಗ್ಬಂಧನವನ್ನು ಮುಂದುವರಿಸಿರುವುದಾಗಿ ಶ್ವೇತಭವನದ ವರದಿ ತಿಳಿಸಿದೆ.

“ಇರಾನ್‌ನೊಂದಿಗಿನ ಅಮೆರಿಕದ ಸಂಬಂಧಗಳು ಇನ್ನೂ ಸಾಮಾನ್ಯ ಸ್ಥಿತಿಗೆ ಬಂದಿಲ್ಲ. 1981ರ ಜನವರಿ 19ರಂದು ಇರಾನ್‌ನೊಂದಿಗೆ ಮಾಡಿಕೊಂಡ ಒಪ್ಪಂದಗಳನ್ನು ಜಾರಿಗೊಳಿಸುವ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದೆ. 1979ರ ನವೆಂಬರ್ 14ರಂದು ಘೋಷಿಸಿದ ರಾಷ್ಟ್ರೀಯ ತುರ್ತು ಪರಿಸ್ಥಿತಿಯು 2011ರ ನವೆಂಬರ್ 14ರ ನಂತರವೂ ಮುಂದುವರಿಯಬೇಕಿದೆ” ಎಂದು ಒಬಾಮ ಸೋಮವಾರ ಕಾಂಗ್ರೆಸ್‌ಗೆ ಕಳುಹಿಸಿದ ನೋಟಿಸ್‌ನಲ್ಲಿ     ತಿಳಿಸಿರುವುದಾಗಿ ಅದು ಹೇಳಿದೆ.

`1979ರ ನವೆಂಬರ್‌ನಲ್ಲಿ ಇರಾನ್ ವಿದ್ಯಾರ್ಥಿಗಳು ಟೆಹರಾನ್‌ನಲ್ಲಿನ ಅಮೆರಿಕ ರಾಯಭಾರ ಕಚೇರಿಯ 52 ಸಿಬ್ಬಂದಿಯನ್ನು ಸುಮಾರು 444 ದಿನಗಳ ಕಾಲ ಒತ್ತೆಯಾಗಿರಿಸಿದ ನಂತರ ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧಗಳು ಮುರಿದುಬಿದ್ದವು.

ಆಮೇಲೆ ವಿಧಿಸಿದ ಈ ದಿಗ್ಬಂಧನವನ್ನು ಪ್ರತಿವರ್ಷವೂ ನವೀಕರಿಸಲಾಗುತ್ತಿದ್ದು, ಇದರನ್ವಯ ಒಬಾಮ ಅವರೂ ದಿಗ್ಬಂಧನವನ್ನು ವಿಸ್ತರಿಸಿದ್ದಾರೆ. ಇದೊಂದು ತಾಂತ್ರಿಕ ನಿರ್ಧಾರವಾಗಿದೆ~ ಎಂದು ಅದು ನುಡಿದಿದೆ.

1981ರ ಜನವರಿಯಲ್ಲಿ ಅಲ್ಜೀರಿಯಾದ ಮಧ್ಯಸ್ಥಿಕೆಯೊಂದಿಗೆ ಅಮೆರಿಕ ಮತ್ತು ಇರಾನ್, ತಮ್ಮ ನಡುವಿನ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುವ ಒಪ್ಪಂದಗಳಿಗೆ ಸಹಿ ಹಾಕಿದವು. ಈ ಸಂದರ್ಭದಲ್ಲಿ ಅಮೆರಿಕ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವುದು ಸೇರಿದಂತೆ ದ್ವಿಪಕ್ಷೀಯ ಬಾಂಧವ್ಯಗಳನ್ನು ಬಲಪಡಿಸಲು ಇರಾನ್‌ಗೆ ಕೆಲವು ಮೂಲಭೂತ ತತ್ವಗಳನ್ನು ತಿಳಿಸಿತ್ತು.
 
ಆಗಿನಿಂದಲೂ ಅಮೆರಿಕವು ಇರಾನ್ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮೂಲಕ ದಿಗ್ಬಂಧನ ವಿಧಿಸುವ ಪ್ರಕ್ರಿಯೆ ಆರಂಭಿಸಿತು. ಪಾಶ್ಚಿಮಾತ್ಯರು ಇರಾನ್ ರಹಸ್ಯ ಅಣ್ವಸ್ತ್ರ ಕಾರ್ಯಕ್ರಮ ಹೊಂದಿರುವುದಾಗಿ ಶಂಕಿಸುತ್ತಿದ್ದು, ಆದರೆ ಇದನ್ನು ನಿರಾಕರಿಸಿರುವ ಇಸ್ಲಾಮಿಕ್ ರಿಪಬ್ಲಿಕ್, ತಾನು ನಾಗರಿಕ ಉದ್ದೇಶಗಳಿಂದ ಮಾತ್ರ ಪರಮಾಣು ವಿದ್ಯುತ್ ಅವಶ್ಯಕತೆ ಪೂರೈಸಿಕೊಳ್ಳುತ್ತಿರುವುದಾಗಿ ಹೇಳುತ್ತಿದೆ.

ಐಎಇಎ ವರದಿ ನಿರೀಕ್ಷೆ: ಜಾಗತಿಕ ಪರಮಾಣು ಕಾವಲು ಸಮಿತಿಯಾದ `ಐಎಇಎ~ (ಅಂತರರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ) ಸಲ್ಲಿಸಲಿರುವ ಮುಂಬರುವ ವರದಿಯು ಇರಾನ್ ಅಣ್ವಸ್ತ್ರ ಕಾರ್ಯಕ್ರಮದ ಬಗ್ಗೆ ತಾನು ಹೊಂದಿದ ಭಾವನೆಗಳನ್ನು ಪ್ರತಿಧ್ವನಿಸುವುದೆಂಬ ನಿರೀಕ್ಷೆಯಲ್ಲಿರುವುದಾಗಿ ಹೇಳಿರುವ ಅಮೆರಿಕವು, ತಾನು ರಾಜತಾಂತ್ರಿಕತೆಯ ಮೇಲೆ ಈಗ ಗಮನಹರಿಸಿದ್ದು, ಯಾವುದೇ ಕ್ರಮವನ್ನೂ ತಳ್ಳಿಹಾಕಲಾಗದು ಎಂದು ತಿಳಿಸಿದೆ.

ಇರಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂದೆಂದಿಗಿಂತಲೂ ಈಗ ಹೆಚ್ಚಿನ ಅಂತರರಾಷ್ಟ್ರೀಯ ಬೆಂಬಲ ಕ್ರೋಡೀಕರಿಸಲು ಒಬಾಮ ಯತ್ನಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ   ಜೇ ಕಾರ್ನಿ ಅವರು, ಅಂತರರಾಷ್ಟ್ರೀಯ ನಿಬಂಧನಗಳಿಗೆ ಬದ್ಧವಾಗಲು ವಿಫಲವಾಗಿರುವ ಇರಾನ್ ವಿರುದ್ಧ    ನಿಷ್ಠುರದ ದಿಗ್ಬಂಧನ ಕ್ರಮಗಳ ಪುನರ್ ಜಾರಿಗೊಳಿಸುವ ಸಾಧ್ಯತೆಯನ್ನು ತಳ್ಳಿಹಾಕಲಿಲ್ಲ.
 

ಧಾರ್ಮಿಕ ನಾಯಕರಿಂದ ಟೀಕೆ
ಟೆಹರಾನ್ ವರದಿ:
ಅಮೆರಿಕವು ಐಎಇಎಯನ್ನು ಇರಾನ್ ವಿರುದ್ಧ ಸಾಧನವಾಗಿ ಬಳಕೆ ಮಾಡುತ್ತಿರುವುದಾಗಿ ಇರಾನ್ ಪರಿಣತರ ಅಸೆಂಬ್ಲಿಯ ಹಿರಿಯ ಸದಸ್ಯ ಮತ್ತು ಇಸ್ಲಾಮಿಕ್ ಧಾರ್ಮಿಕ ನಾಯಕ ಅಯಾತೊಲ್ಲಾ ಖಟಾಮಿ ಟೀಕಿಸಿದ್ದಾರೆ.

`ಇರಾನ್‌ನ ಪರಮಾಣು ಕಾರ್ಯಕ್ರಮಗಳನ್ನು ನಿಲ್ಲಿಸಲು ಒತ್ತಡ ಹೇರುವುದಕ್ಕಾಗಿ ಐಎಇಎ ಸೇರಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಅಮೆರಿಕ ಬಳಸಿಕೊಳ್ಳುತ್ತಿದೆ~ ಎಂದು ಅವರು ಸೋಮವಾರ ಸರ್ಕಾರದ ಐಆರ್‌ಐಬಿ ಟಿವಿ ವೆಬ್‌ಸೈಟ್‌ನಲ್ಲಿ ದೂಷಿಸಿರುವುದಾಗಿ ಕ್ಸಿನ್ಹುವಾ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT