ADVERTISEMENT

ಇಸ್ರೇಲ್‌ ವಿಮಾನಯಾನ ಸಂಸ್ಥೆಯ ಆಕ್ಷೇಪ

ಪಿಟಿಐ
Published 28 ಮಾರ್ಚ್ 2018, 19:32 IST
Last Updated 28 ಮಾರ್ಚ್ 2018, 19:32 IST
ಇಸ್ರೇಲ್‌ ವಿಮಾನಯಾನ ಸಂಸ್ಥೆಯ ಆಕ್ಷೇಪ
ಇಸ್ರೇಲ್‌ ವಿಮಾನಯಾನ ಸಂಸ್ಥೆಯ ಆಕ್ಷೇಪ   

ಜೆರುಸಲೇಂ: ನವದೆಹಲಿಯಿಂದ ಸೌದಿ ಅರೇಬಿಯಾ ಮೂಲಕ ಇಸ್ರೇಲ್‌ನ ಟೆಲ್‌ ಅವೀವ್‌ ನಗರಕ್ಕೆ ಏರ್‌ಇಂಡಿಯಾದ ವಿಮಾನ ಸಂಪರ್ಕ ಕಲ್ಪಿಸುವುದರ ವಿರುದ್ಧ ಇಸ್ರೇಲ್‌ನ ರಾಷ್ಟ್ರೀಯ ವಿಮಾನ ಸಂಸ್ಥೆ ಇಎಲ್‌ಎಎಲ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಏರ್‌ ಇಂಡಿಯಾ ಸಂಸ್ಥೆಯ ಎಐ 139 ವಿಮಾನ ಇದೇ 24ರಂದು ಇಸ್ರೇಲ್‌ನ ಬೆನ್ ಗ್ಯುರಿಯನ್ ವಿಮಾನ ನಿಲ್ದಾಣದಲ್ಲಿ ಬಂದು ಇಳಿದ ಬೆನ್ನಲ್ಲೇ ಇದರ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ.

‘ಸೌದಿ ಅರೇಬಿಯಾ ವಾಯುಪ್ರದೇಶದಲ್ಲಿ ಹಾರಾಟ ನಡೆಸಲು ಇಸ್ರೇಲ್‌ನ ವಿಮಾನಯಾನ ಸಂಸ್ಥೆಗೆ ಅನುಮತಿ ಇಲ್ಲ. ಹೀಗಾಗಿ ಬೇರೊಂದು ವಿಮಾನಯಾನ ಸಂಸ್ಥೆಗೆ ಈ ಅವಕಾಶ ಕಲ್ಪಿಸಿರುವುದು ಸರಿಯಲ್ಲ. ಇಸ್ರೇಲ್‌ ಸರ್ಕಾರವು ತನ್ನದೇ ವಿಮಾನಯಾನ ಸಂಸ್ಥೆಯ ಮೇಲಿನ ಬದ್ಧತೆಯಿಂದ ವಿಮುಖವಾಗಿದೆ.

ADVERTISEMENT

ಇದು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಮ್ಮೇಳನ–1944ರ 9 ಮತ್ತು 11ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಇಎಲ್‌ ಎಎಲ್‌ ಸಂಸ್ಥೆಯ ಸಿಇಒ ಗೊನೆನ್‌ ಉಸಿಷ್ಕಿನ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ’ ಎಂದು ಟೈಮ್ಸ್‌ ಆಫ್‌ ಇಸ್ರೇಲ್‌ ವರದಿ ಮಾಡಿದೆ.

‘ಈಗಾಗಲೇ ಇಸ್ರೇಲ್‌ ಸರ್ಕಾರ, ಸಾರಿಗೆ ಸಚಿವ, ಏರ್‌ ಇಂಡಿಯಾ ಸೇರಿದಂತೆ ಇತರರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಸಂಸ್ಥೆಯ ವಕ್ತಾರ ಹೇಳಿದ್ದಾರೆ.

ಏರ್‌ ಇಂಡಿಯಾ ವಿಮಾನವು ಓಮನ್, ಸೌದಿ ಅರೇಬಿಯಾ ಮತ್ತು ಜೋರ್ಡನ್ ವಾಯು ಪ್ರದೇಶದ ಮೂಲಕ ಟೆಲ್‌ ಅವೀವ್‌ಗೆ ಪ್ರಯಾಣಿಸಲಿದೆ. ಈ ಪ್ರಯಾಣದ ಅವಧಿ ಏಳು ಗಂಟೆ 15 ನಿಮಿಷ. ನವದೆಹಲಿ–ಟೆಲ್‌ ಅವೀವ್‌ ನಡುವಿನ ಅತ್ಯಂತ ಸಮೀಪದ ಮಾರ್ಗ ಇದಾಗಿದೆ.

ತನ್ನ ವಾಯುಪ್ರದೇಶ ಬಳಸಿಕೊಳ್ಳಲು ಸೌದಿ ಅರೇಬಿಯಾ ಒಪ್ಪಿಗೆ ನೀಡಿದ್ದರಿಂದ ಪ್ರಯಾಣ ಅವಧಿಯಲ್ಲಿ 2 ಗಂಟೆ 10 ನಿಮಿಷ ಉಳಿತಾಯವಾಗಲಿದೆ. ಪ್ರತಿ ಮಂಗಳವಾರ, ಗುರುವಾರ ಮತ್ತು ಭಾನುವಾರ ವಿಮಾನವು ಸಂಚರಿಸಲಿದೆ’ ಎಂದು ಕಳೆದ ವಾರ ಏರ್‌ ಇಂಡಿಯಾ ಅಧ್ಯಕ್ಷ ಪ್ರದೀಪ್ ಸಿಂಗ್‌ ಖರೋಲ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.