ADVERTISEMENT

ಇಸ್ರೇಲ್: ಹೆಬ್ಬಾವಿನ ಪ್ರಾಣಕ್ಕೆ ಎರವಾದ ಆಧುನಿಕ ಪೂತನಿ!

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 19:30 IST
Last Updated 15 ಮಾರ್ಚ್ 2011, 19:30 IST

ಲಂಡನ್ (ಐಎಎನ್‌ಎಸ್): ರೂಪದರ್ಶಿಯೊಬ್ಬಳ ಕುಚಕ್ಕೆ ಕಚ್ಚಿದ ದೈತ್ಯ ಗಾತ್ರದ ಹೆಬ್ಬಾವು ಮೃತಪಟ್ಟ ವಿಲಕ್ಷಣ ಘಟನೆಯೊಂದು ಇಸ್ರೇಲಿನ ಟೆಲ್ ಅವೀವ್‌ನಲ್ಲಿ ಛಾಯಾಚಿತ್ರ ತೆಗೆಯುವ ಸಂದರ್ಭದಲ್ಲಿ ನಡೆದಿದೆ ಎಂದು ‘ಡೈಲಿ ಮೇಲ್’ ಪತ್ರಿಕೆ ಸೋಮವಾರ ವರದಿ ಮಾಡಿದೆ.

ಇಸ್ರೇಲಿ ರೂಪದರ್ಶಿ ಓರಿಟ್ ಫಾಕ್ಸ್ ತನ್ನ ಕುಚ ಸೌಂದರ್ಯವನ್ನು ಇಮ್ಮಡಿಗೊಳಿಸಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಳು. ಅವಳಿಗೆ ಉಬ್ಬಿದ ಎದೆಯನ್ನು ಹೊಮ್ಮಿಸಲು ಕಾರ್ಬನಿಕ್ ಪಾಲಿಮರ್ (ಸಿಲಿಕೋನ್) ರಾಸಾಯನಿಕ ಧಾತುಗಳನ್ನು ಬಳಸಿಕೊಂಡು ವೈದ್ಯರು ಈ ಶಸ್ತ್ರಚಿಕಿತ್ಸೆ ನಡೆಸಿದ್ದರು. ಆದರೆ ಈ ವಿಷಕಾರಿ ರಾಸಾಯನಿಕವು ಹೆಬ್ಬಾವಿನ ಜೀವಕ್ಕೆ ಎರವಾಗಿದ್ದು ಮಾತ್ರ ದುರಂತ.

ಛಾಯಾಚಿತ್ರ ಸೆರೆ ಹಿಡಿಯುವಾಗ ಓರಿಟ್ ತನ್ನ ಮೈಮಾಟವನ್ನು ಆಕರ್ಷಕವಾಗಿ ತೋರಲು ಹೆಬ್ಬಾವನ್ನು ಕೊರಳ ಸುತ್ತ ಸುತ್ತಿಕೊಂಡು ವಕ್ಷಸ್ಥಳದ ಮೇಲೆ ಇಳಿಬಿಟ್ಟಿದ್ದಳು. ತರುಣಿಯ ‘ಸೌಂದರ್ಯ’ಕ್ಕೆ ಉನ್ಮಾದಗೊಂಡ  ಹೆಬ್ಬಾವು ಪ್ರೀತಿಯಿಂದ ಅವಳ ಕುಚಕ್ಕೆ  ‘ಮುತ್ತಿಟ್ಟಿದ್ದೇ’ ತಡ ಪ್ರಾಣವನ್ನೇ ಕಳೆದುಕೊಂಡಿತು!

ಹೆಬ್ಬಾವನ್ನು ಸುತ್ತಿಕೊಂಡ ಓರಿಟ್ ಮೊದಲು ಯಾವ ಅಳುಕಿಲ್ಲದೆ ಆರಾಮವಾಗಿಯೇ ವಿವಿಧ ಭಂಗಿಯಲ್ಲಿ ಛಾಯಾಗ್ರಾಹಕರಿಗೆ ಫೋಸ್ ನೀಡಿದಳು. ಅವಳ ಭಿನ್ನಾಣಕ್ಕೆ ಬೆಂಬಲ ನೀಡಿದ ಹೆಬ್ಬಾವು ಕೂಡ ಆಕೆಯ ಕಾಲು, ಸೊಂಟ, ಕತ್ತನ್ನು ಆಪ್ಯಾಯಮಾನವಾಗಿಯೇ ಆಲಂಗಿಸಿಕೊಂಡಿತ್ತು. ಹೆಬ್ಬಾವಿನ  ‘ಪ್ರೀತಿ’ಗೆ ಪ್ರತಿಸ್ಪಂದಿಸಿದ ಓರಿಟ್ ಅದರ ಕತ್ತನೊಮ್ಮೆ ನೆಕ್ಕಿದಳು; ಆದರೆ ಅದರ ಕುತ್ತಿಗೆ ಮೇಲಿದ್ದ ಹಿಡಿತವನ್ನು ಕಳೆದುಕೊಂಡಳು. ಆಗ ಹೆಬ್ಬಾವು ಅವಳ ಎಡ ಕುಚಕ್ಕೆ ಕಚ್ಚಿತು.

ಹೆಬ್ಬಾವಿನ ಈ ವಿಪರೀತ ಪ್ರೀತಿಯಿಂದ ಭಯಭೀತಳಾದ ಓರಿಟ್ ಜೋರಾಗಿ ಕಿರುಚಿದಳು. ಅಲ್ಲಿದ್ದ ಸಹಾಯಕರು ಕೂಡಲೇ ಹೆಬ್ಬಾವನ್ನು ಆಕೆಯ ಮೈಮೇಲಿಂದ ಎಳೆದುಕೊಂಡರು.

ಈ ಆಕಸ್ಮಿಕದಿಂದ ದಿಗಿಲುಗೊಂಡು ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಓರಿಟ್‌ಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಪೂತನಿಯಂತೆ ವಿಷಕಾರಿ ಸ್ತನಹೊಂದಿದ್ದ ಓರಿಟ್‌ಳಿಗೆ ಕಚ್ಚಿದ  ಹೆಬ್ಬಾವು ಪ್ರಾಣಕಳೆದುಕೊಳ್ಳಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.