ADVERTISEMENT

ಈಜಿಪ್ಟ್‌ನಲ್ಲಿ ಮಧ್ಯಂತರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 20:29 IST
Last Updated 4 ಜುಲೈ 2013, 20:29 IST
ಅದ್ಲಿ ಮಹಮೂದ್ ಮನ್ಸೌರ್
ಅದ್ಲಿ ಮಹಮೂದ್ ಮನ್ಸೌರ್   

ಕೈರೊ (ಪಿಟಿಐ):  ಸಾಂವಿಧಾನಿಕ ಉನ್ನತ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅದ್ಲಿ ಮಹಮೂದ್ ಮನ್ಸೌರ್ (67) ಅವರು ಹಂಗಾಮಿ ಅಧ್ಯಕ್ಷರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ, ಪದಚ್ಯುತ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ಅವರನ್ನು ಗೃಹಬಂಧನಕ್ಕೆ ಒಳಪಡಿಸಿರುವ ಈಜಿಪ್ಟ್ ಸೇನೆ, ಅವರ ಬೆಂಬಲಿತ ಮುಸ್ಲಿಂ ಬ್ರದರ್‌ಹುಡ್ ಚಳವಳಿ ವಿರುದ್ಧವೂ ತೀವ್ರ ಕಾರ್ಯಾಚರಣೆ ನಡೆಸಿ, ಹಿರಿಯ ನಾಯಕರನ್ನೆಲ್ಲ ಬಂಧಿಸಿದೆ.

ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆಯಾದ ಅರಬ್ ದೇಶದ ಮೊದಲ ಅಧ್ಯಕ್ಷರನ್ನು ಬುಧವಾರ ಪದಚ್ಯುತಗೊಳಿಸಿದ ಸೇನೆಯು ಮಾರನೇ ದಿನವೇ ಮಾರ್ಸಾ ಮಟ್ರೌದ ಕುಗ್ರಾಮವೊಂದರಲ್ಲಿ ಮುಸ್ಲಿಂ ಬ್ರದರ್‌ಹುಡ್ ಮುಖಂಡರನ್ನು ಸುತ್ತುವರಿದು, ಅದರ ಉನ್ನತ ನಾಯಕ ಮೊಹಮ್ಮದ್ ಬದಿಯೆ ಅವರನ್ನು ಬಂಧಿಸಿತು.  ಈ ಮಧ್ಯೆ, ಕ್ಷಿಪ್ರಕ್ರಾಂತಿಯ ನಂತರ ಉದ್ವಿಗ್ನ ಸ್ಥಿತಿಯಲ್ಲಿರುವ ರಾಷ್ಟ್ರದಲ್ಲಿ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ಪರ ಮತ್ತು ವಿರೋಧಿ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು ಕನಿಷ್ಠ ಹತ್ತು ಜನರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಭಾನುವಾರದಿಂದೀಚೆಗೆ ಸತ್ತವರ ಸಂಖ್ಯೆ 50ಕ್ಕೆ ಏರಿದೆ.

ಮೂರು ದಶಕಗಳ ಕಾಲ ಈಜಿಪ್ಟ್‌ನ ಸರ್ವಾಧಿಕಾರಿಯಾಗಿದ್ದ ಹೊಸ್ನಿ ಮುಬಾರಕ್ ಪದಚ್ಯುತಗೊಂಡ ನಂತರ 2012ರಲ್ಲಿ ನಡೆದ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಮುಸ್ಲಿಂ ಬ್ರದರ್ಸ್‌ಹುಡ್ ಪಕ್ಷದ ನಾಯಕ ಮೊರ್ಸಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.