ADVERTISEMENT

ಉಗ್ರರ ಬೆದರಿಕೆ: ಮುಸ್ಲಿಂ ರಾಷ್ಟ್ರಗಳಲ್ಲಿನ ಅಮೆರಿಕ ರಾಯಭಾರ ಕಚೇರಿ ನಾಳೆ ಬಂದ್

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 19:59 IST
Last Updated 2 ಆಗಸ್ಟ್ 2013, 19:59 IST

ವಾಷಿಂಗ್ಟನ್ (ಪಿಟಿಐ): ಉಗ್ರರ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ, ಅಮೆರಿಕವು ಆ.4ರ ಭಾನುವಾರ ಮುಸ್ಲಿಂ ರಾಷ್ಟ್ರಗಳಲ್ಲಿರುವ ತನ್ನ ಎಲ್ಲಾ ರಾಯಭಾರ ಕಚೇರಿಗಳು ಮತ್ತು ಕಾನ್ಸುಲೇಟ್ ಕಚೇರಿಗಳಿಗೆ ಬಾಗಿಲು ತೆರೆಯದಂತೆ ನಿರ್ದೇಶನ ನೀಡಿದೆ.

ಸದ್ಯಕ್ಕೆ ಆ.4ರಂದು ಬಾಗಿಲು ಮುಚ್ಚಿರಲು ನಿರ್ದೇಶನ ನೀಡಲಾಗಿದೆಯಾದರೂ ಇದು ಇನ್ನಷ್ಟು ದಿನಗಳ ಕಾಲ ವಿಸ್ತರಣೆಯಾಗುವ ಸಾಧ್ಯತೆ ಇದೆ. ಭದ್ರತೆ ಹಾಗೂ ಸುರಕ್ಷತಾ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ, ಯಾವ್ಯಾವ ರಾಷ್ಟ್ರಗಳಿಗೆ ಈ ನಿರ್ದೇಶನ ಅನ್ವಯವಾಗುತ್ತದೆ ಎಂಬ ವಿವರವನ್ನು ಅವರು ಹೊರಗೆಡವಿಲ್ಲ  ಎಂದು ವಿದೇಶಾಂಗ ಕಚೇರಿ ವಕ್ತಾರರಾದ ಮೇರಿ ಹರ್ಫ್ ಹೇಳಿದ್ದಾರೆ.

ಸಂಭಾವ್ಯ ದಾಳಿಯ ಸಮಯ ಮತ್ತು ಸ್ಥಳದ ಬಗ್ಗೆ ಏನೂ ಗೊತ್ತಾಗಿಲ್ಲ. ಆದರೂ, ದಾಳಿ ಸಾಧ್ಯತೆ ಬಗ್ಗೆ ಅತ್ಯಂತ ದಟ್ಟವಾಗಿ ವದಂತಿ ಹಬ್ಬಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಧ್ಯ ಪ್ರಾಚ್ಯ ಮೂಲದಿಂದ ಅಲ್‌ಖೈದಾ ಹೆಸರಿನಲ್ಲಿ ಈ ಬೆದರಿಕೆ ಹಾಕಲಾಗಿದೆ ಎಂದು ಟಿ.ವಿ. ವಾಹಿನಿಯೊಂದು ವರದಿ ಮಾಡಿದೆ.

ರಂಜಾನ್ ವ್ರತದ ಕೊನೆಯ ಹಂತದಲ್ಲಿ ಹಾಗೂ ಲಿಬಿಯಾದ ಬೆಂಘಝಿಯಲ್ಲಿನ ಅಮೆರಿಕ ರಾಜತಾಂತ್ರಿಕ ಕಚೇರಿ ಆವರಣದಲ್ಲಿ ಉಗ್ರರು ನಡೆಸಿದ ದಾಳಿಗೆ ಒಂದು ವರ್ಷವಾಗುತ್ತಿರುವ ಸಂದರ್ಭದಲ್ಲೇ ಈ ಬೆದರಿಕೆ ಬಂದಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಮಧ್ಯ ಪ್ರಾಚ್ಯ ಮೂಲದಿಂದ ಅಲ್ ಖೈದಾ ಹೆಸರಿನಲ್ಲಿ ಈ ಬೆದರಿಕೆ ಹಾಕಲಾಗಿದೆ ಎಂದು ಟಿ.ವಿ. ವಾಹಿನಿಯೊಂದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.