ADVERTISEMENT

ಉತ್ತರ ಕೊರಿಯಾದ ಉಪ ರಾಯಭಾರಿ ಎಚ್ಚರಿಕೆ: ಯಾವುದೇ ಕ್ಷಣ ಪರಮಾಣು ಯುದ್ಧ

ಪಿಟಿಐ
Published 17 ಅಕ್ಟೋಬರ್ 2017, 17:35 IST
Last Updated 17 ಅಕ್ಟೋಬರ್ 2017, 17:35 IST
ಉತ್ತರ ಕೊರಿಯಾದ ಉಪ ರಾಯಭಾರಿ ಎಚ್ಚರಿಕೆ: ಯಾವುದೇ ಕ್ಷಣ ಪರಮಾಣು ಯುದ್ಧ
ಉತ್ತರ ಕೊರಿಯಾದ ಉಪ ರಾಯಭಾರಿ ಎಚ್ಚರಿಕೆ: ಯಾವುದೇ ಕ್ಷಣ ಪರಮಾಣು ಯುದ್ಧ   

ವಿಶ್ವಸಂಸ್ಥೆ/ ಟೋಕಿಯೊ (ರಾಯಿಟರ್ಸ್): ‘ಯಾವುದೇ ಕ್ಷಣದಲ್ಲಿ ಪರಮಾಣು ಯುದ್ಧ ಪ್ರಾರಂಭವಾಗುವ ಪರಿಸ್ಥಿತಿಗೆ ಕೊರಿಯಾ ಪರ್ಯಾಯ ದ್ವೀಪ ತಲುಪಿದೆ’ ಎಂದು ವಿಶ್ವಸಂಸ್ಥೆಯಲ್ಲಿ ಉತ್ತರ ಕೊರಿಯಾದ ಉಪ ರಾಯಭಾರಿ ಆಗಿರುವ ಕಿಮ್ ಇನ್ ರ‍್ಯಾಂಗ್ ಸೋಮವಾರ ಎಚ್ಚರಿಸಿದ್ದಾರೆ.

‘1970ರಿಂದ ಅಮೆರಿಕದ ನೇರ ಮತ್ತು ತೀವ್ರ ಪರಮಾಣು ಬೆದರಿಕೆಗೆ ಒಳಗಾಗುತ್ತಿರುವ ಜಗತ್ತಿನ ಏಕೈಕ ರಾಷ್ಟ್ರ ಉತ್ತರ ಕೊರಿಯಾ. ಹೀಗಾಗಿ ಸ್ವಯಂ ರಕ್ಷಣೆಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಹಕ್ಕು ಉತ್ತರ ಕೊರಿಯಾಕ್ಕಿದೆ’ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿಶ್ಸಸ್ತ್ರೀಕರಣ ಸಮಿತಿಯಲ್ಲಿ ಅವರು ಹೇಳಿದ್ದಾರೆ.

‘ಅಮೆರಿಕವು ಪ್ರತಿವರ್ಷ ಪರಮಾಣು ಶಕ್ತಿ ಬಳಸಿ ಬೃಹತ್ ಪ್ರಮಾಣದ ಸಮರಾಭ್ಯಾಸ ನಡೆಸುತ್ತದೆ. ಅಲ್ಲದೆ, ಉತ್ತರ ಕೊರಿಯಾದ ಮುಖಂಡನ ಹತ್ಯೆಗಾಗಿ ರಹಸ್ಯ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಅವರು ಆರೋಪಿಸಿದರು.

ADVERTISEMENT

‘ಉತ್ತರ ಕೊರಿಯಾ ವಿರೋಧವಾಗಿ ಅಮೆರಿಕ ನಡೆಸುವ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳದಿದ್ದರೆ ಯಾವ ರಾಷ್ಟ್ರದ ಮೇಲೂ ಪರಮಾಣು ಬಾಂಬ್ ಬಳಸುವ ಅಥವಾ ಬೆದರಿಕೆ ಒಡ್ಡುವ ಉದ್ದೇಶ ನಮಗಿಲ್ಲ’ ಎಂದು ಪರಮಾಣು ಶಸ್ತ್ರಾಸ್ತ್ರದ ಚರ್ಚೆಗೆ ಕಿಮ್ ಸಿದ್ಧಪಡಿಸಿದ ಟಿಪ್ಪಣಿಯಲ್ಲಿ ಇದೆ. ಆದರೆ ಈ ಒಕ್ಕಣೆಯನ್ನು ಕಿಮ್ ಗಟ್ಟಿಯಾಗಿ ಓದಲಿಲ್ಲ.

ಒಪ್ಪಂದ ಮೊಟಕುಗೊಳಿಸಿದ ರಷ್ಯಾ: ‘ಉತ್ತರ ಕೊರಿಯಾದ ಮೇಲೆ ವಿಶ್ವಸಂಸ್ಥೆ ಹೇರಿರುವ ನಿರ್ಬಂಧದ ಭಾಗವಾಗಿ ಆ ದೇಶದೊಂದಿಗಿನ ಆರ್ಥಿಕ ಮತ್ತು ಇತರೆ ಒಪ್ಪಂದಗಳನ್ನು ನಾವು ಮೊಟಕುಗೊಳಿಸುತ್ತಿದ್ದೇವೆ’ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸೋಮವಾರ ಹೇಳಿದ್ದರು.
ಐರೋಪ್ಯ ಒಕ್ಕೂಟವೂ ಉತ್ತರ ಕೊರಿಯಾ ಮೇಲೆ ಹೊಸ ನಿರ್ಬಂಧಗಳನ್ನು ಹೇರಿದೆ.

‘ಮಾತುಕತೆ ಸಾಧ್ಯತೆ ತಳ್ಳಿಹಾಕಿಲ್ಲ

ಉತ್ತರ ಕೊರಿಯಾದೊಂದಿಗೆ ನೇರ ಮಾತುಕತೆ ನಡೆಸುವ ಕೊನೆಯ ಸಾಧ್ಯತೆಯನ್ನು ಅಮೆರಿಕ ತಳ್ಳಿಹಾಕಿಲ್ಲ ಎಂದು ಅಮೆರಿಕದ ಉಪ ಕಾರ್ಯದರ್ಶಿ ಜಾನ್ ಜೆ. ಸುಲ್ಲಿವಾನ್ ಅವರು ಟೋಕಿಯೊದಲ್ಲಿ ಹೇಳಿದ್ದಾರೆ. ಕಿಮ್ ಇನ್ ರ‍್ಯಾಂಗ್ ಅವರ ಎಚ್ಚರಿಕೆಯ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

ಅಮೆರಿಕವನ್ನು ಗುರಿಯಾಗಿಸಿಕೊಂಡು ಪರಮಾಣು ಸಿಡಿತಲೆ ಹೊತ್ತು ಸಾಗುವ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿ
ಸಿರುವ ಉತ್ತರ ಕೊರಿಯಾ ಜೊತೆ ಮಾತುಕತೆ ನಡೆಸಲು ಅಮೆರಿಕವೇ ನಿರಾಸಕ್ತಿ ತೋರಿತ್ತು.‌ ‘ಕೊರಿಯಾ ಪರ್ಯಾಯ ದ್ವೀಪದಲ್ಲಿ ಪರಿಸ್ಥಿತಿ ತೀರಾ ಸೂಕ್ಷ್ಮ ಹಾಗೂ ಸಂಕೀರ್ಣವಾಗಿರುವ ಈ ಸಂದರ್ಭದಲ್ಲಿ  ಸಮರಾಭ್ಯಾಸವನ್ನು ನಿಯಂತ್ರಿಸಬಹುದು ಹಾಗೂ ಆತಂಕದ ಸ್ಥಿತಿಯನ್ನು ತಗ್ಗಿಸಬಹುದು ಎಂದು ಚೀನಾ ಈಗಲೂ ನಂಬುತ್ತದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.