
ವಾಷಿಂಗ್ಟನ್: ವಿಮಾನದ ಮೂಲಕ ಅಮೆರಿಕ ಪ್ರವೇಶಿಸುವ ಪ್ರಯಾಣಿಕರು ಲ್ಯಾಪ್‌ಟಾಪ್, ಐಪ್ಯಾಡ್ ಹಾಗೂ ಕ್ಯಾಮೆರಾದಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವುದು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಡೊನಾಲ್ಡ್ ಟ್ರಂಪ್ ಆಡಳಿತ ಉತ್ತರ ಆಫ್ರಿಕಾ ಹಾಗೂ ಮಧ್ಯ ಪ್ರಾಚ್ಯದ ಎಂಟು ರಾಷ್ಟ್ರಗಳ ಪ್ರಯಾಣಿಕರಿಗೆ ಹೊಸ ನಿಯಂತ್ರಣ ನೀತಿಯನ್ನು ಪ್ರಕಟಿಸಿದೆ.
ಎಂಟು ರಾಷ್ಟ್ರಗಳ ಹತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ನೇರವಾಗಿ ಅಮೆರಿಕ ಪ್ರವೇಶಿಸುವ ವಿಮಾನಗಳಲ್ಲಿ ಈ ನೀತಿ ಅನ್ವಯವಾಗಲಿದೆ. ಈ ಕುರಿತು ಸೌದಿ ಅರೇಬಿಯಾದ ಸುದ್ದಿ ಸಂಸ್ಥೆ ಮತ್ತು ರಾಯಲ್ ಜೋರ್ಡಾನಿಯನ್ ಏರ್‌ಲೈನ್ಸ್ ಪ್ರಕಟಣಯಿಂದ ತಿಳಿದು ಬಂದಿದೆ.
ವಿಮಾನ ಪ್ರಯಾಣಿಕರು ತರುವ ಸಾಮಾನುಗಳಲ್ಲಿ ಕ್ಯಾಮೆರಾ, ಲ್ಯಾಪ್‌ಟಾಪ್ ಹಾಗೂ ಐಪ್ಯಾಡ್ ಸೇರಿದಂತೆ ಬಹುತೇಕ ಎಲೆಕ್ಟ್ರಾನಿಕ್ ಉಪಕರಣಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದ್ದು, ಮಂಗಳವಾರದಿಂದಲೇ ಈ ನಿಯಮ ಅನ್ವಯವಾಗಿದೆ.
ಈಜಿಪ್ಟ್‌ನ ಕೈರೋ, ಜೋರ್ಡನ್‌ನ ಅಮನ್, ಕುವೈತ್ ನಗರ, ಮೊರಾಕೋ, ಕತರ್, ಸೌದಿ ಅರೇಬಿಯಾದ ಎರಡು ವಲಯ, ಟರ್ಕಿಯ ಇಸ್ತಾನ್‌ಬುಲ್ ಹಾಗೂ ಅಬು ಧಾಬಿ ಮತ್ತು ದುಬೈನಿಂದ ಅಮೆರಿಕಕ್ಕೆ ಹೊರಡುವ ವಿಮಾನಗಳಲ್ಲಿ ಪ್ರಯಾಣಿಕರು ಈ ನಿಯಮ ಪಾಲಿಸಬೇಕಾಗುತ್ತದೆ.
ಎಂಟು ರಾಷ್ಟ್ರಗಳಿಂದ ಹೊರಡುವ ವಿಮಾನಗಳಲ್ಲಿ ಮಾತ್ರ ಅನ್ವಯವಾಗುವಂತೆ ಹೊರಡಿಸಿರುವ ಎಲೆಕ್ಟ್ರಾನಿಕ್ ಉಪಕರಣ ನಿಷೇಧಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಮೊಬೈಲ್ ಹಾಗೂ ವೈದ್ಯಕೀಯ ಸಾಧನಗಳ ಮೇಲೆ ನಿಷೇಧ ಹೇರಿಕೆಯಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.